ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್: ಜಾಗರೂಕರಾಗಿದ್ದು ಸ್ವರ್ಗದಡೆಗೆ ನೋಟವನ್ನು ಬೀರಿರಿ
ವರದಿ: ವ್ಯಾಟಿಕನ್ ನ್ಯೂಸ್
ಆಗಮನ ಕಾಲದ ಮೊದಲನೆಯ ಭಾನುವಾರದಂದು ಮಧ್ಯಾಹ್ನ ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೀಗೆ ಮಾತನಾಡಿದ ಅವರು ನಮ್ಮ ಬದುಕಿನಲ್ಲಿ ಯಾವುದೇ ಕಷ್ಟಗಳು ಇರಲಿ ಅಥವಾ ನೋವುಗಳು ಇರಲಿ, ಎಲ್ಲವನ್ನು ಪ್ರಭುವಿಗೆ ಸಮರ್ಪಿಸುತ್ತಾ ಜಾಗರೂಕರಾಗಿದ್ದು ಸ್ವರ್ಗದೆಡೆಗೆ ನೋಟವನ್ನು ಬೀರಿರಿ ಎಂದು ಹೇಳಿದ್ದಾರೆ.
"ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ಮಾನವ ಸಹಜ ಭಯ ಹಾಗೂ ವಿನಾಶಗಳ ಕುರಿತು ಮಾತನಾಡುತ್ತಾ, ಪ್ರಾಪಂಚಿಕ ಭಯ ಹಾಗೂ ವಿನಾಶಗಳಿಗೆ ನೀವು ಹೆದರಬೇಕಾಗಿಲ್ಲ" ಎಂದು ತಮ್ಮ ಶಿಷ್ಯರಿಗೆ ಹೇಳುತ್ತಾರೆ. ಹೀಗೆ ಅವರು ಹೇಳುವಾಗ ಅವರಿಗೆ ಧೈರ್ಯವನ್ನು ತುಂಬುತ್ತಾ, ನಿಮ್ಮ ಸಂಗಡ ಲೋಕಾಂತ್ಯದವರೆಗೂ ನಾನಿದ್ದೇನೆ ಎಂಬ ಅಭಯವನ್ನು ನೀಡುತ್ತಾರೆ" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಇಂದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಹೇಳುತ್ತಾರೆ.
ಇದನ್ನೇ ಉದಾಹರಣೆಯಾಗಿ ನೆರೆದಿದ್ದ ಭಕ್ತಾಧಿಗಳಿಗೆ ಹೇಳುವ ಪೋಪ್ ಫ್ರಾನ್ಸಿಸ್ ಅವರು "ಪ್ರಸ್ತುತ ಕಾಲಘಟ್ಟದಲ್ಲಿ ನಾವು ಈ ಪ್ರಪಂಚದಲ್ಲಿ ಅನೇಕ ನೋವುಗಳನ್ನು ಹಾಗೂ ಸಂಕಷ್ಟಗಳನ್ನು ಎದುರಿಸುತ್ತೇವೆ. ಕೆಲವೊಮ್ಮೆ ಅವುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿಲ್ಲ ಎಂದು ನಾವು ಭಯಭೀತರಾಗುತ್ತೇವೆ. ಈ ಸಂದರ್ಭದಲ್ಲಿ ನಾವು ಭಯಪಡದೆ ಹಾಗೂ ಎದೆಗುಂದದೆ ಪ್ರಭುವಿನಲ್ಲಿ ವಿಶ್ವಾಸವನ್ನಿಡಬೇಕು. ಸದಾ ಜಾಗರೂಕರಾಗಿದ್ದು, ಸ್ವರ್ಗದೆಡೆಗೆ ನಮ್ಮ ನೋಟವನ್ನು ಬೀರಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಾವೆಲ್ಲರೂ ಸದಾ ಜಾಗರೂಕರಾಗಿರಬೇಕು. ಯೇಸು ಕ್ರಿಸ್ತರು ಹೇಳುವಂತೆ ಎಚ್ಚರಿಕೆಯಿಂದಿಒರ ಬೇಕು. ಏಕೆಂದರೆ ಯಾವ ಸಮಯದಲ್ಲಿ ನರಪುತ್ರನು ಬರುತ್ತಾನೆ ಎಂಬುದು ನಮಗೆ ತಿಳಿಯುವುದಿಲ್ಲ. ಹಾಗಾಗಿ, ಆತನು ಬರುವಾಗ ನಾವೆಲ್ಲರೂ ಎಚ್ಚರಿಕೆಯಿಂದ ಹಾಗೂ ಜಾಗರೂಕತೆಯಿಂದ ಇರಬೇಕು" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು.