ಹುಡುಕಿ

ತ್ರಿಕಾಲ ಪ್ರಾರ್ಥನೆಯ ನಂತರ ಪೋಪ್ ಫ್ರಾನ್ಸಿಸ್: ಶಾಂತಿಯ ಬೆನ್ನಟ್ಟುವುದು ಎಲ್ಲರ ಕರ್ತವ್ಯವಾಗಿದೆ

ವಿಶ್ವಗುರು ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಮುಂಬರಲಿರುವ ಕ್ರಿಸ್ತ ಜಯಂತಿ ಕಾಲದ ಕುರಿತು ಮಾತನಾಡಿದ್ದಾರೆ. "ಯುದ್ಧಗಳು ಇನ್ನು ಮುಂದುವರೆದರೆ ಮಾನವತೆಯ ಸೋಲು ನಿಶ್ಚಿತ" ಎಂದು ಹೇಳಿದ್ದಾರೆ.

ವರದಿ: ಕೀಲ್ಚೆ ಗುಸ್ಸಿ, ಅಜಯ್ ಕುಮಾರ್

ವಿಶ್ವಗುರು ಫ್ರಾನ್ಸಿಸ್ ಅವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಮುಂಬರಲಿರುವ ಕ್ರಿಸ್ತ ಜಯಂತಿ ಕಾಲದ ಕುರಿತು ಮಾತನಾಡಿದ್ದಾರೆ. "ಯುದ್ಧಗಳು ಇನ್ನು ಮುಂದುವರೆದರೆ ಮಾನವತೆಯ ಸೋಲು ನಿಶ್ಚಿತ" ಎಂದು ಹೇಳಿದ್ದಾರೆ.  

ಹೆಜ್ಬೊಲ್ಲಾ ಹಾಗೂ ಇಸ್ರೇಲ್ ಸೇನೆಯ ಮಧ್ಯೆ ಮೊನ್ನೆ ಉಂಟಾಗಿರುವ ಕದನವಿರಾಮ ಒಪ್ಪಂದವನ್ನು ಉಲ್ಲೇಖಿಸಿ, ಭಾನುವಾರದ ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು "ಈಗಷ್ಟೇ ಶಾಂತಿಯ ಸಣ್ಣ ಬೆಳಕೊಂದು ಕಾಣಿಸುತ್ತಿದೆ. ಅದು ಇನ್ನಷ್ಟು ಪಸರಿಸಿ, ಲೋಕವೆಲ್ಲಾ ಶಾಂತಿಯಿಂದ ತುಂಬಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದರು. 

ಈ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಲೆಬಾನನ್ ಜನತೆಗೆ ಕೂಡಲೇ ಅಧ್ಯಕ್ಷರನ್ನು ಆಯ್ಕೆಮಾಡುವಂತೆ ಹಾಗೂ ಆ ಮೂಲಕ ದೇಶದ ಎಲ್ಲಾ ಸಂಸ್ಥೆಗಳು ಹಿಂದಿನಂತೆ ಸಹಜವಾಗಿ ಕಾರ್ಯನಿರ್ವಹಿಸಲು ಅನುವಾಗುವಂತೆ ಮಾಡಬೇಕೆಂದು ಕಿವಿಮಾತನ್ನು ಹೇಳಿದರು. ನೂತರ ಸರ್ಕಾರವು ಅವಶ್ಯಕವಾಗಿರುವ ಸುಧಾರಣೆಯನ್ನು ಮಾಡಲಿ ಹಾಗೂ ಆ ಮೂಲಕ ದೇಶವನ್ನು ಶಾಂತಿ ಹಾಗೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲಿ ಎಂದು ಅವರು ಅಭಿಪ್ರಾಯ ಪಟ್ಟರು.

ಗಾಝಾ, ಸಿರಿಯಾ ಮತ್ತು ಉಕ್ರೇನ್ ಸೇರಿದಂತೆ ಯುದ್ಧಗಳು ನಡೆಯುತ್ತಿರುವ ದೇಶಗಳನ್ನು ನೆನಪಿಸಿಕೊಂಡ ಪೋಪ್ ಫ್ರಾನ್ಸಿಸ್ ಅವರು ಅಲ್ಲಿಯೂ ಸಹ ಶಾಂತಿ ನೆಲೆಸಬೇಕು ಎಂದು ಹೇಳಿದರು. ಇಸ್ರೇಲಿ ಯುದ್ಧ ಖೈದಿಗಳ ಬಿಡುಗಡೆ ಸೇರಿದಂತೆ ಗಾಝಾ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡಲು ಅವಕಾಶವನ್ನು ನೀಡಬೇಕೆಂದು ಪೋಪ್ ಫ್ರಾನ್ಸಿಸ್ ಅವರು ಮನವಿ ಮಾಡಿಕೊಂಡರು.

"ಯುದ್ಧಗಳು ದೇವರಿಗೆ ತೋರುವ ಅಗೌರರವಾಗಿದೆ" ಎಂದು ಹೇಳಿರುವ ವಿಶ್ವಗುರು ಫ್ರಾನ್ಸಿಸ್ ಅವರು "ಶಾಂತಿ ಸ್ಥಾಪನೆ ಎಂಬುದು ಕೇವಲ ಕೆಲವೇ ಜನರ ಜವಾಬ್ದಾರಿಯಲ್ಲ. ಬದಲಿಗೆ ಇದು ಎಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ" ಎಂದು ಹೇಳಿದ್ದಾರೆ. "ಯುದ್ಧದ ಕಾರ್ಮೋಡಗಳು ಇನ್ನೂ ಸಹ ಮುಂದುವರೆದರೆ ಮಾನವೀಯತೆ ಅಥವಾ ಮಾನವಕುಲ ಎಂಬುದು ಕೊನೆಯಾಗುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಎಚ್ಚರಿಸಿದ್ದಾರೆ.   

01 December 2024, 14:38