ಸಾರ್ವಜನಿಕ ಭೇಟಿಯಲ್ಲಿ ಪೋಪ್: ಪ್ರಬೋಧನೆಗಳು 10 ನಿಮಿಷಗಳಿಗಿಂತ ಹೆಚ್ಚಿರಬಾರದು
ವರದಿ: ಫ್ರಾನ್ಸಿಸ್ಕೋ ಮೆರ್ಲೊ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದ ಸಂತ ಪೇತ್ರರ ಚೌಕದಲ್ಲಿ ಭಕ್ತಾಧಿಗಳನ್ನು ಸಾರ್ವಜನಿಕವಾಗಿ ಭೇಟಿ ಮಾಡಿದರು. ಈ ವೇಳೆ ಮಾತನಾಡಿರುವ ಅವರು ಗುರುಗಳ ಪ್ರಬೋಧನೆಗಳು ವಿಷಯಾಧಾರಿತವಾಗಿರಬೇಕು ಹಾಗೂ ಅವು 10 ನಿಮಿಷಗಳಿಗಿಂತ ಹೆಚ್ಚಿರಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಪವಿತ್ರಾತ್ಮರ ಕುರಿತ ತಮ್ಮ ಧರ್ಮೋಪದೇಶವನ್ನು ಮುಂದುವರೆಸಿದರು. ಸಂತ ಪೇತ್ರನು ಬರೆದ ಮೊದಲ ಪತ್ರದ ಕುರಿತು ಹಾಗೂ ಅದರಲ್ಲಿನ ಪ್ರಬೋಧನೆಯ ಕುರಿತು ಮಾತನಾಡಿದ ಅವರು "ನಾವು ನೀಡುವ ಪ್ರಬೋಧನೆಯು ವಿಷಯಾಧಾರಿತವಾಗಿರಬೇಕು. ನಾವು ಏನನ್ನು ಭಕ್ತಾಧಿಗಳಿಗೆ ಹೇಳುತ್ತಿದ್ದೇವೆ ಎಂಬುದನ್ನು ಮೊದಲು ನಾವು ನಂಬಬೇಕು" ಎಂದು ಹೇಳಿದರು.
"ಪವಿತ್ರಾತ್ಮರ ಮೂಲಕ ನಾವು ಶುಭಸಂದೇಶವನ್ನು ಸಾರಬೇಕು" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ಎಂದಿಗೂ ಸಹ ನಮ್ಮ ಪ್ರಬೋಧನೆಗಳು ಹತ್ತು ನಿಮಿಷದ ಮೇಲೆ ಇರಬಾರದು. ಏಕೆಂದರೆ, ಎಂಟು ನಿಮಿಷದವರೆಗೂ ಜನರ ಗಮನವು ಇರುತ್ತದೆ. ಅದಾದ ನಂತರ ಗಮನ ಕೇಂದ್ರೀಕರಿಸಲು ಬಹಳ ಕಷ್ಟವಾಗುತ್ತದೆ. ಆದುದರಿಂದ ಎಂದಿಗೂ ಹತ್ತು ನಿಮಿಷಕ್ಕೂ ಹೆಚ್ಚು ಕಾಲ ಪ್ರಬೋಧನೆಯನ್ನು ನೀಡಬಾರದು. ಇದು ಬಹಳ ಮುಖ್ಯ" ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಅಂತಿಮವಾಗಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಪ್ರಬೋಧಕರು ತಮ್ಮ ಕುರಿತು ಪ್ರಬೋಧನೆ ನೀಡಬಾರದು. ಬದಲಿಗೆ, ಪ್ರಭು ಕ್ರಿಸ್ತರ ಕುರಿತು ಪ್ರಬೋಧನೆಯನ್ನು ನೀಡಬೇಕು" ಎಂದು ಹೇಳಿದರು. ಇದಕ್ಕಾಗಿ ಪವಿತ್ರಾತ್ಮರ ಕೃಪಾವರಗಳನ್ನು ಬೇಡಬೇಕು ಎಂದೂ ಸಹ ಅವರು ಹೇಳಿದರು.