ಪವಿತ್ರ ದ್ವಾರವನ್ನು ತೆರೆಯುವ ಮೂಲಕ ಜ್ಯೂಬಿಲಿ 2025 ಕ್ಕೆ ಚಾಲನೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಪೋಪ್ ಫ್ರಾನ್ಸಿಸ್ ಅವರು ಕ್ರಿಸ್ಮಸ್ ಜಾಗರಣೆ ಬಲಿಪೂಜೆಯ ವೇಳೆ ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರವನ್ನು ತೆರೆಯುವುದರ ಮೂಲಕ ಜ್ಯೂಬಿಲಿ 2025 ಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದ್ದಾರೆ. ತಮ್ಮ ಪ್ರಬೋಧನೆಯಲ್ಲಿ ಮಾತನಾಡಿರುವ ಅವರು ಬೆತ್ಲೆಹೇಮಿನ ಕ್ರಿಸ್ತ ಕಂದ ಜಗತ್ತಿಗೆ ಅನಂತ ಭರವಸೆಯನ್ನು ನೀಡುತ್ತಾನೆ ಎಂದು ಹೇಳಿದ್ದಾರೆ.
ಕ್ರಿಸ್ಮಸ್ ಜಾಗರಣೆ ಬಲಿಪೂಜೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ವರ್ಷವನ್ನು ಉದ್ಘಾಟಿಸಿದ್ದಾರೆ. ಇದು ಇಪ್ಪತ್ತೈದು ವರ್ಷಕ್ಕೊಮ್ಮೆ ಬರುವ ಅಪರೂಪದ ಸಂಗತಿಯಾಗಿದೆ. ಜನವರಿ 2026 ರಂದು ಇದೇ ದ್ವಾರಗಳನ್ನು ಮುಚ್ಚುವ ಮೂಲಕ ಮೂರು ರಾಯರ ಹಬ್ಬದಂದು ಅಧಿಕೃತವಾಗಿ ಜ್ಯೂಬಿಲಿ ವರ್ಷವು ಮುಕ್ತಾಯವಾಗುತ್ತದೆ.
ಪವಿತ್ರ ದ್ವಾರದ ಪ್ರಾಮುಖ್ಯತೆ ಎಂದರೆ ಇದರ ಮೂಲಕವೇ ಎಲ್ಲರೂ ಪರಿಶುದ್ಧತೆಯೆಡೆಗೆ ನಡೆಯುವ ಕಾರಣ ಇದನ್ನು ಪವಿತ್ರ ದ್ವಾರ ಎಂದು ಕರೆಯಲಾಗುತ್ತದೆ. ಜ್ಯೂಬಿಲಿ ಹಾಡನ್ನು ಹಾಡುವಾಗ ಪೋಪ್ ಫ್ರಾನ್ಸಿಸ್ ಅವರ ಹಿಂದೆ ಎಲ್ಲಾ ದೈವಜನರೂ ಈ ಪವಿತ್ರ ದ್ವಾರದ ಮೂಲಕ ಹಾದು ಹೋದರು.
ಜ್ಯೂಬಿಲಿ ನಮ್ಮ ಶಕ್ತಿಯನ್ನು ಗುರುತಿಸಿ, ನಮ್ಮ ವಿಶ್ವಾಸವನ್ನು ವೃದ್ಧಿಸುತ್ತದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಕ್ರೈಸ್ತ ಬದುಕಿನ ವಿಶ್ವಾಸದ ಬೆಳಕು ಎಲ್ಲಾ ಪುರುಷ ಹಾಗೂ ಸ್ತ್ರೀಯರನ್ನು ಸ್ಪರ್ಶಿಸಿ ಅವರನ್ನು ಪ್ರಭುವಿನ ಹಾದಿಯಲ್ಲಿ ನಡೆಸಲಿ ಎಂದು ಅವರು ಹೇಳಿದ್ದಾರೆ. "ಇಮ್ಮಾನುವೇಲ್" ದೇವರು ನಮ್ಮೊಡನೆ ಇದ್ದಾರೆ ಎಂಬ ಪದದಲ್ಲಿ ನಾವು ನಮ್ಮ ಭರವಸೆಯನ್ನು ಕಾಣುತ್ತೇವೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಇಂದು ಜ್ಯೂಬಿಲಿ ವರ್ಷದ ದ್ವಾರಗಳು ತೆರೆದಿವೆ. ಈ ಸಂದರ್ಭದಲ್ಲಿ ದೇವರು ಪ್ರತಿಯೊಬ್ಬರಲ್ಲೂ ಮಾತನಾಡಿ "ನಿಮಗೂ ಭರವಸೆ ಇದೆ" ಎಂದು ಹೇಳುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ನುಡಿದರು.