ಅಮಲೋದ್ಭವಿ ಮಾತೆಯ ಹಬ್ಬದಲ್ಲಿ ಪೋಪ್: ಇತರರಿಗೆ ತೆರೆಯುವ ಹೃದಯದಲ್ಲಿ ಶ್ರೀಮಂತಿಕೆ ಇದೆ
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು 21 ನೂತನ ಕಾರ್ಡಿನಲ್ಲುಗಳ ಜೊತೆಗೂಡಿ ಅಮಲೋಧ್ಭವಿ ಮಾತೆಯ ಹಬ್ಬದಂದು ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಪ್ರಾಪಂಚಿಕ ಶ್ರೀಮಂತಿಕೆಯನ್ನು ಬಿಟ್ಟು, ಆಧ್ಯಾತ್ಮಿಕತೆಯ ಪ್ರೀತಿ, ಭರವಸೆ, ನಂಬಿಕೆ ಹಾಗೂ ವಿಶ್ವಾಸವನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.
"ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇದ್ದು, ನಮಗೆ ಬೇಕಾದುದದನ್ನು ಅನುಭವಿಸುವ ಶ್ರೀಮಂತಿಕೆ ಇದ್ದು, ನಮ್ಮ ಹೃದಯಗಳು ಇತರರಿಗೆ ತೆರೆಯದೆ ಇದ್ದರೆ, ಅವುಗಳು ತಣ್ಣಗಾಗಿ, ಭಾವನೆಗಳನ್ನು ಕಳೆದುಕೊಂಡಿದ್ದರೆ ಅದರಿಂದಾಗುವ ಪ್ರಯೋಜನವಾದರೂ ಏನು?" ಎಂದು ಪೋಪ್ ಫ್ರಾನ್ಸಿಸ್ ಅವರು ಅಮಲೋದ್ಭವಿ ಮಾತೆಯ ಮಹೋತ್ಸವದ ಬಲಿಪೂಜೆಯಲ್ಲಿನ ತಮ್ಮ ಪ್ರಬೋಧನೆಯಲ್ಲಿ ಭಕ್ತಾಧಿಗಳನ್ನು ಪ್ರಶ್ನಿಸಿದ್ದಾರೆ.
"ಯುದ್ದಗಳೂ ಸೇರಿದಂತೆ ಅನೇಕ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಕೋಪಗಳಿಂದ ಅರ್ಧ ಜಗತ್ತು ಹಸಿವು ಹಾಗೂ ನೋವಿನಿಂದ ಬಳಲುತ್ತಿರುವಾಗ, ಇನ್ನುಳಿದ ಅರ್ಧ ಜಗತ್ತಿನಲ್ಲಿರುವ ಶ್ರೀಮಂತ ದೇಶಗಳಲ್ಲಿ ಜನರು ಆರಾಮಾಗಿರುವುದರಿಂದ ಆಗುವ ಪ್ರಯೋಜನವಾದರೂ ಏನು?" ಎಂದು ಪೋಪ್ ಫ್ರಾನ್ಸಿಸ್ ಕೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತೆ ಮರಿಯಮ್ಮನವರ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಮಾತೆ ಮರಿಯಮ್ಮನವರು ಎಂದೂ ತಮ್ಮ ಹೃದಯವನ್ನು ದೇವರಿಗಾಗಿ ತೆರೆದಿದ್ದಾರೆ. ಆತ್ಮರಿಗೆ ಸದಾ ವಿಧೇಯತೆಯಿಂದ, ಪಾಪರಹಿತ ಜೀವನವನ್ನು ಜೀವಿಸಿದ್ದಾರೆ. ಅವರು ನಮಗೆ ಮಾದರಿಯಾಗಬೇಕು" ಎಂದು ಹೇಳಿದರು. ನಮ್ಮ ಬದುಕು ಹಾಗೂ ವಿಶ್ವಾಸದ ನವೀಕರಣಕ್ಕಾಗಿ ಮಾತೆ ಮರಿಯಮ್ಮನವರನ್ನು ಸ್ಪೂರ್ತಿಯನ್ನಾಗಿ ನಾವೆಲ್ಲರೂ ತೆಗೆದುಕೊಳ್ಳಬೇಕೆಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಮಾತೆ ಮರಿಯಮ್ಮನವರ ಉದಾಹರಣೆಯನ್ನು ಆಳವಡಿಸಿಕೊಂಡು ನಾವು ಒಗ್ಗಟ್ಟಿನಿಂದ, ಐಕ್ಯತೆಯಿಂದ ಹಾಗೂ ಒಂದೇ ಸಮುದಾಯವಾಗಿ ಜೀವಿಸಬಹುದು" ಎಂದು ಹೇಳಿದರು. ವಿಶ್ವಧರ್ಮಸಭೆಯ ಗುರುವಾಗಿ ತನ್ನ ಸೇವೆಯಲ್ಲಿ ಸಹಾಯ ಮಾಡಲು ಈ ನೂತನ ಕಾರ್ಡಿನಲ್ಲುಗಳಿಗೆ ಪೋಪ್ ಫ್ರಾನ್ಸಿಸ್ ಅವರು ಇದೇ ವೇಳೆ ಮನವಿ ಮಾಡಿದರು.