ಹುಡುಕಿ

ನಿಕರಾಗುವಾದ ಜನತೆಗೆ ಪೋಪ್ ಫ್ರಾನ್ಸಿಸ್: ಸಂಕಷ್ಟದ ಸಮಯದಲ್ಲಿಯೂ ದೇವರಲ್ಲಿ ಭರವಸೆಯಿಡಿ

ಅಮಲೋದ್ಭವಿ ಮಾತೆಯ ನವದಿನಗಳನ್ನು ಆಚರಿಸುತ್ತಿರುವ ನಿಕರಾಗುವ ದೇಶದ ಜನತೆಗೆ ಪ್ರೇಷಿತ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್ ಅವರು ಸವಾಲುಗಳ ಸಂದರ್ಭದಲ್ಲಿಯೂ ದೇವರಲ್ಲಿ ಭರವಸೆ ಇಡುವಂತೆ ಕರೆ ನೀಡಿದ್ದಾರೆ.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಅಮಲೋದ್ಭವಿ ಮಾತೆಯ ನವದಿನಗಳನ್ನು ಆಚರಿಸುತ್ತಿರುವ ನಿಕರಾಗುವ ದೇಶದ ಜನತೆಗೆ ಪ್ರೇಷಿತ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್ ಅವರು ಸವಾಲುಗಳ ಸಂದರ್ಭದಲ್ಲಿಯೂ ದೇವರಲ್ಲಿ ಭರವಸೆ ಇಡುವಂತೆ ಕರೆ ನೀಡಿದ್ದಾರೆ. 

"ಪ್ರಭುವಿನ ಕೃಪಾಶೀರ್ವಾದಗಳನ್ನು ಮರೆಯಬೇಡಿ. ಏಕೆಂದರೆ ನಮ್ಮೆಲ್ಲಾ ಸಂಕಷ್ಟದ ಸಂದರ್ಭಗಳಲ್ಲಿ ಅದು ನಮ್ಮೊಡನೆ ಇದ್ದು, ನಮಗೆ ಮಾರ್ಗದರ್ಶನವನ್ನು ನೀಡುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. "ದೇವರಲ್ಲಿನ ನಂಬಿಕೆ ಹಾಗೂ ಧರ್ಮಸಭೆಯಲ್ಲಿ ವಿಶ್ವಾಸ ಎಂಬ ಎರಡು ಕಂಬಗಳನ್ನು ನೀವು ಗಟ್ಟಿಯಾಗಿ ಹಿಡಿದುಕೊಂಡರೆ ನೀವು ಎಂದಿಗೂ ಮುಳುಗುವುದಿಲ್ಲ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ನಿಕರಾಗುವಾ ದೇಶದಲ್ಲಿ ಸಮಾಜೋ-ರಾಜಕೀಯ ಪರಿಸ್ಥಿತಿಗಳು ಧರ್ಮಸಭೆಗೆ ವಿರುದ್ಧವಾಗಿದ್ದು, ಧರ್ಮಸಭೆಯನ್ನು ಗುರಿಯಾಗಿಸುತ್ತಿರುವ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ನಿಕರಾಗುವ ದೇಶದ ಜನತೆಗೆ ಪ್ರೇಷಿತ ಪತ್ರವನ್ನು ಬರೆದಿದ್ದಾರೆ.

ಮಾತೆ ಮರಿಯಮ್ಮನವರಲ್ಲಿ ನಿಕರಾಗುವಾದ ಜನತೆ ಇಟ್ಟಿರುವ ಅತೀವ ವಿಶ್ವಾಸದ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಈ ದಿನಗಳಲ್ಲಿ ನೀವು ಅಮಲೋದ್ಭವಿ ಮಾತೆಯ ನವದಿನಗಳನ್ನು ಆರಂಭಿಸುತ್ತಿದ್ದೀರಿ. ಮಾತೆ ಮರಿಯಮ್ಮನವರು ನಿಮ್ಮ ಜೊತೆ ಸದಾ ಇದ್ದು, ನಿಮ್ಮನ್ನು ಪೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿದ್ದಾರೆ.

ಮುಂದುವರೆದು ತಮ್ಮ ಪತ್ರದಲ್ಲಿ ಪೋಪ್ ಫ್ರಾನ್ಸಿಸ್ ಅವರು "ನಿಮ್ಮನ್ನೇ ದೇವರಿಗೆ ಸಮರ್ಪಿಸಿಕೊಂಡು, ಮಾತೆ ಮರಿಯಮ್ಮನವರಂತೆ ಬದುಕಿನಲ್ಲಿ ದೇವರಿಗೆ ಮೊದಲ ಸ್ಥಾನವನ್ನು ನೀಡಿರಿ. ಪವಿತ್ರ ಜಪಸರದಂತಹ ಪವಿತ್ರ ಸಾಧನವನ್ನು ನಿಮ್ಮ ರಕ್ಷಣೆಯ ಸಾಧನವನ್ನಾಗಿಸಿಕೊಳ್ಳಿರಿ" ಎಂದು ಪೋಪ್ ಫ್ರಾನ್ಸಿಸ್ ಅವರು ನಿಕರಾಗುವಾದ ಜನತೆಗೆ ಕರೆ ನೀಡಿದ್ದಾರೆ.       

02 December 2024, 14:14