ಸಂತ ಸ್ತೇಫನರ ದಿನದಂದು ಪೋಪ್ ಫ್ರಾನ್ಸಿಸ್: ದೇವರು ಎಲ್ಲವನ್ನು, ಯಾವಾಗಲೂ ಕ್ಷಮಿಸುತ್ತಾರೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಸಂತ ಸ್ತೇಫನರ ಹಬ್ಬದಂದು ಪೋಪ್ ಫ್ರಾನ್ಸಿಸ್ ಅವರು ತ್ರಿಕಾಲ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವಿಶ್ವಾಸದ ಸಲುವಾಗಿ ಹಿಂಸೆಯನ್ನು ಅನುಭವಿಸುತ್ತಿರುವವರಿಗಾಗಿ ಅವರು ಭಕ್ತಿಯಿಂದ ಪ್ರಾರ್ಥಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕೆಂದು ಹೇಳಿದ್ದಾರೆ.
"ಸಂತ ಸ್ತೇಫನರನ್ನು ಅವರ ಕ್ರೈಸ್ತ ವಿಶ್ವಾಸಕ್ಕಾಗಿ ಅನ್ಯ ಜನರು ಕಲ್ಲೆಸೆದು ಕೊಲ್ಲುತ್ತಿರುವಾಗ ಅವರು ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ನಾವು ಅಂದುಕೊಂಡರೂ ಸಹ, ಅದೇ ಸಮಯದಲ್ಲಿ ಅವರು ತಮ್ಮನ್ನು ಕೊಲ್ಲುತ್ತಿರುವವರಿಗಾಗಿ ದೇವರಲ್ಲಿ ಪ್ರಾರ್ಥಿಸಿದರು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು, ಇಂತಹ ವಿಶ್ವಾಸ ನಮ್ಮದಾಗಬೇಕು. ಹಾಗಾಗಬೇಕೆಂದರೆ ನಾವು ನಮ್ಮ ಹೃದಯಗಳನ್ನು ದೇವರಿಗೆ ತೆರೆಯಬೇಕು ಎಂದು ಹೇಳಿದ್ದಾರೆ.
"ತಂದೆಯಾದ ದೇವರು ತನ್ನ ಮಕ್ಕಳಿಗೆ ಸದಾ ಒಳಿತನ್ನೇ ಬಯಸುತ್ತಾರೆ ಎಂಬುದರ ಸಂಕೇತವಾಗಿದ್ದಾರೆ ಸಂತ ಸ್ತೇಫನರು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. ಪ್ರಪಂಚದ ಮೂಲೆ ಮೂಲೆಗಳಲ್ಲಿ ಈಗಲೂ ಸಹ ಶುಭ ಸಂದೇಶದ ಕಾರಣಕ್ಕಾಗಿ ಜನರು ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ನುಡಿದರು.
"ದೇವರನ್ನು ಅರಿತುಕೊಳ್ಳಲು ನಾನು ಉತ್ಸುಕನಾಗಿದ್ದೇನೆಯೇ?" "ನನ್ನನ್ನು ಯಾತನೆಗೆ ದೂಡುವವರಿಗೂ ಸಹ ನಾನು ಒಳಿತನ್ನು ಬಯಸುತ್ತೇನೆಯೇ?" ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಪೋಪ್ ಫ್ರಾನ್ಸಿಸ್ ತಮ್ಮ ಮಾತುಗಳನ್ನು ಮುಗಿಸಿದರು.