ಪೋಪ್ ಫ್ರಾನ್ಸಿಸ್: ನಾವು ಭರವಸೆ, ಶಾಂತಿ, ಮತ್ತು ಐಕ್ಯತೆಯ ಯಾತ್ರಿಕರಾಗುವಂತಾಗಲಿ
ವರದಿ: ತದ್ದೆಯೂಸ್ ಜೋನ್ಸ್
ಪೋಪ್ ಫ್ರಾನ್ಸಿಸ್ ಅವರು ಜಗತ್ತಿನ ಜನತೆಗೆ ಕ್ರಿಸ್ತ ಜಯಂತಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು ಪವಿತ್ರ ದ್ವಾರಗಳನ್ನು ತೆರೆಯುವ ಮೂಲಕ ಜ್ಯೂಬಿಲಿ ವರ್ಷವನ್ನು ಅಧಿಕೃತವಾಗಿ ಉದ್ಘಾಟಿಸಲಾಗಿದೆ. ಈ ವೇಳೆ ನಮ್ಮ ಹೃದಯಗಳೂ ಸಹ ಸದಾ ತೆರೆದಿರಬೇಕು ಎಂದು ಹೇಳಿದ್ದಾರೆ. "ಊರ್ಬಿ ಎತ್ ಆರ್ಬಿ" (ನಗರದಿಂದ ವಿಶ್ವಕ್ಕೆ) ಆಶೀರ್ವಾದವನ್ನು ನೀಡುವ ಮೂಲಕ ಅವರು ಎಲ್ಲರಿಗಾಗಿ ಪ್ರಾರ್ಥಿಸಿದ್ದಾರೆ.
ಈಸ್ಟರ್ ಹಬ್ಬದಂದು ಅವರು ನೀಡುವ "ಊರ್ಬಿ ಎತ್ ಆರ್ಬಿ" (ನಗರದಿಂದ ವಿಶ್ವಕ್ಕೆ) ಆಶೀರ್ವಾದವನ್ನು ಇಂದೂ ಸಹ ಅವರು ನೀಡಿದ್ದಾರೆ. ನಮಗಾಗಿ ದೇವರ ಹೃದಯ ಸದಾ ತೆರೆದಿರುತ್ತದೆ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು ನಮ್ಮನ್ನು ಪ್ರೀತಿಸುವ ಹಾಗೂ ಕ್ಷಮಿಸುವ ಹೃದಯಕ್ಕೆ ನಾವು ಮತ್ತೆ ಹಿಂತಿರುಗಬೇಕು ಎಂದು ಹೇಳಿದ್ದಾರೆ. ಮುಂದುವರೆದು ಮಾತನಾಡಿರುವ ಅವರು "ರಕ್ಷಣೆಯ ದ್ವಾರ ನಮ್ಮೆಲ್ಲರಿಗೂ ಸದಾ ತೆರೆದಿದೆ" ಎಂದು ನುಡಿದಿದ್ದಾರೆ.
ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳ ಕುರಿತು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಜ್ಯೂಬಿಲಿ ವರ್ಷದಲ್ಲಿ ಎಲ್ಲಾ ಯುದ್ಧಗಳು ನಿಂತು, ಶಸ್ತ್ರಾಸ್ತ್ರಗಳ ಶಬ್ದ ಮೌನವಾಗಿ ಪರಿಣಮಿಸಲಿ ಎಂದು ಹೇಳಿದ್ದಾರೆ. ಈ ಜಗತ್ತಿನಲ್ಲಿ ಶಾಂತಿ ಮತ್ತೆ ಮರುಸ್ಥಾಪನೆಯಾಗಲಿ. ಮುಗ್ಧ ಜನತೆಯ ನೋವು, ಬವಣೆ ಹಾಗೂ ಯಾತನೆ ಕೊನೆಯಾಗಲಿ ಎಂದು ಪೋಪ್ ಫ್ರಾನ್ಸಿಸ್ ಶಾಂತಿಯ ಕುರಿತ ಮನವಿಯನ್ನು ಮತ್ತೆ ಪುನರುಚ್ಛರಿಸಿದರು.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಜನತೆಗೆ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥಿಸುವಂತೆ ಕರೆ ನೀಡಿದರು.
ಪವಿತ್ರ ದ್ವಾರದ ಉದ್ಘಾಟನೆ
ಪೋಪ್ ಫ್ರಾನ್ಸಿಸ್ ಅವರು ಕ್ರಿಸ್ಮಸ್ ಜಾಗರಣೆ ಬಲಿಪೂಜೆಯ ವೇಳೆ ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರವನ್ನು ತೆರೆಯುವುದರ ಮೂಲಕ ಜ್ಯೂಬಿಲಿ 2025 ಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿದ್ದಾರೆ. ತಮ್ಮ ಪ್ರಬೋಧನೆಯಲ್ಲಿ ಮಾತನಾಡಿರುವ ಅವರು ಬೆತ್ಲೆಹೇಮಿನ ಕ್ರಿಸ್ತ ಕಂದ ಜಗತ್ತಿಗೆ ಅನಂತ ಭರವಸೆಯನ್ನು ನೀಡುತ್ತಾನೆ ಎಂದು ಹೇಳಿದ್ದಾರೆ.
ಕ್ರಿಸ್ಮಸ್ ಜಾಗರಣೆ ಬಲಿಪೂಜೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಜ್ಯೂಬಿಲಿ ವರ್ಷವನ್ನು ಉದ್ಘಾಟಿಸಿದ್ದಾರೆ. ಇದು ಇಪ್ಪತ್ತೈದು ವರ್ಷಕ್ಕೊಮ್ಮೆ ಬರುವ ಅಪರೂಪದ ಸಂಗತಿಯಾಗಿದೆ. ಜನವರಿ 2026 ರಂದು ಇದೇ ದ್ವಾರಗಳನ್ನು ಮುಚ್ಚುವ ಮೂಲಕ ಮೂರು ರಾಯರ ಹಬ್ಬದಂದು ಅಧಿಕೃತವಾಗಿ ಜ್ಯೂಬಿಲಿ ವರ್ಷವು ಮುಕ್ತಾಯವಾಗುತ್ತದೆ.
ಪವಿತ್ರ ದ್ವಾರದ ಪ್ರಾಮುಖ್ಯತೆ ಎಂದರೆ ಇದರ ಮೂಲಕವೇ ಎಲ್ಲರೂ ಪರಿಶುದ್ಧತೆಯೆಡೆಗೆ ನಡೆಯುವ ಕಾರಣ ಇದನ್ನು ಪವಿತ್ರ ದ್ವಾರ ಎಂದು ಕರೆಯಲಾಗುತ್ತದೆ. ಜ್ಯೂಬಿಲಿ ಹಾಡನ್ನು ಹಾಡುವಾಗ ಪೋಪ್ ಫ್ರಾನ್ಸಿಸ್ ಅವರ ಹಿಂದೆ ಎಲ್ಲಾ ದೈವಜನರೂ ಈ ಪವಿತ್ರ ದ್ವಾರದ ಮೂಲಕ ಹಾದು ಹೋದರು.
ಜ್ಯೂಬಿಲಿ ನಮ್ಮ ಶಕ್ತಿಯನ್ನು ಗುರುತಿಸಿ, ನಮ್ಮ ವಿಶ್ವಾಸವನ್ನು ವೃದ್ಧಿಸುತ್ತದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಕ್ರೈಸ್ತ ಬದುಕಿನ ವಿಶ್ವಾಸದ ಬೆಳಕು ಎಲ್ಲಾ ಪುರುಷ ಹಾಗೂ ಸ್ತ್ರೀಯರನ್ನು ಸ್ಪರ್ಶಿಸಿ ಅವರನ್ನು ಪ್ರಭುವಿನ ಹಾದಿಯಲ್ಲಿ ನಡೆಸಲಿ ಎಂದು ಅವರು ಹೇಳಿದ್ದಾರೆ. "ಇಮ್ಮಾನುವೇಲ್" ದೇವರು ನಮ್ಮೊಡನೆ ಇದ್ದಾರೆ ಎಂಬ ಪದದಲ್ಲಿ ನಾವು ನಮ್ಮ ಭರವಸೆಯನ್ನು ಕಾಣುತ್ತೇವೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಇಂದು ಜ್ಯೂಬಿಲಿ ವರ್ಷದ ದ್ವಾರಗಳು ತೆರೆದಿವೆ. ಈ ಸಂದರ್ಭದಲ್ಲಿ ದೇವರು ಪ್ರತಿಯೊಬ್ಬರಲ್ಲೂ ಮಾತನಾಡಿ "ನಿಮಗೂ ಭರವಸೆ ಇದೆ" ಎಂದು ಹೇಳುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ನುಡಿದರು.