ವಿಶ್ವ ಶಾಂತಿ ದಿನದ ಪೋಪ್ ಫ್ರಾನ್ಸಿಸ್ ಅವರ ಸಂದೇಶ: ನಾವು ದೇವರಿಗೆ ಋಣಿಯಾಗಿದ್ದೇವೆ

ಜನವರಿ 1 ರಂದು 58ನೇ ವಿಶ್ವ ಶಾಂತಿ ದಿನದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಈ ಸಂದೇಶದಲ್ಲಿ ಮಾತನಾಡಿರುವ ಅವರು ಈ ದಿನದಂದು ನಾವು ಭರವಸೆಯ ಜ್ಯೂಬಿಲಿ ವರ್ಷದಲ್ಲಿ ಪರಸ್ಪರರ ಸಾಲಗಳನ್ನು ಮನ್ನಿಸಬೇಕು. ಕ್ಷಮೆ ಎಂಬುದನ್ನು ನಾವು ನಮಗೆ ಹಾಗೂ ನಮ್ಮ ಸಹೋದರ ಸಹೋದರಿಯರಿಗೆ ನೀಡಬೇಕು. ಏಕೆಂದರೆ ನಾವು ದೇವರಿಗೆ ಋಣಿಯಾಗಿದ್ದೇವೆ ಹಾಗೂ ಒಂದಲ್ಲಾ ಒಂದು ರೀತಿಯಲ್ಲಿ ಇತರರಿಗೂ ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್

ಜನವರಿ 1 ರಂದು 58ನೇ ವಿಶ್ವ ಶಾಂತಿ ದಿನದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಸಂದೇಶವನ್ನು ನೀಡಿದ್ದಾರೆ. ಈ ಸಂದೇಶದಲ್ಲಿ ಮಾತನಾಡಿರುವ ಅವರು ಈ ದಿನದಂದು ನಾವು ಭರವಸೆಯ ಜ್ಯೂಬಿಲಿ ವರ್ಷದಲ್ಲಿ ಪರಸ್ಪರರ ಸಾಲಗಳನ್ನು ಮನ್ನಿಸಬೇಕು. ಕ್ಷಮೆ ಎಂಬುದನ್ನು ನಾವು ನಮಗೆ ಹಾಗೂ ನಮ್ಮ ಸಹೋದರ ಸಹೋದರಿಯರಿಗೆ ನೀಡಬೇಕು. ಏಕೆಂದರೆ ನಾವು ದೇವರಿಗೆ ಋಣಿಯಾಗಿದ್ದೇವೆ ಹಾಗೂ ಒಂದಲ್ಲಾ ಒಂದು ರೀತಿಯಲ್ಲಿ ಇತರರಿಗೂ ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ.

"ನಮ್ಮ ಪಾಪಗಳನ್ನು ಕ್ಷಮಿಸಿರಿ"

ಪೋಪ್ ಫ್ರಾನ್ಸಿಸ್ ಅವರು ವಿಶ್ವ ಶಾಂತಿ ದಿನದ ಶೀರ್ಷಿಕೆಯನ್ನಾಗಿ ಪ್ರಭುವಿನ ಪ್ರಾರ್ಥನೆಯ "ನಮ್ಮ ಪಾಪಗಳನ್ನು ಕ್ಷಮಿಸಿ, ನಮಗೆ ಶಾಂತಿಯನ್ನು ನೀಡಿರಿ" ಎಂಬ ವಾಕ್ಯವನ್ನು ಆರಿಸಿಕೊಂಡಿದ್ದಾರೆ. ಜ್ಯೂಬಿಲಿ ವರ್ಷ ಎಂಬುದು ದೇವರ ಕೃಪಾವರಗಳ ಹಾಗೂ ವರದಾನದ ವರ್ಷವಾಗಿದ್ದು, ಈ ವರ್ಷದಲ್ಲಿ ನಾವೆಲ್ಲರೂ ನಮ್ಮ ಮನೆ, ಮನ, ಹೃದಯಗಳನ್ನು ತೆರೆಯಬೇಕು. ಜ್ಯೂಬಿಲಿ ವರ್ಷದಲ್ಲಿ ನಾವು ಎಲ್ಲರ ಸಾಲಗಳನ್ನು ಮನ್ನಿಸಬೇಕು. ಇದೇ ನಮ್ಮ ಕರೆಯಾಗಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. "ಜ್ಯೂಬಿಲಿ ಎಂಬುದು ಪಾಪ ಪರಿಹಾರದ ವರ್ಷವೂ ಆಗಿದೆ" ಎಂದು ನುಡಿದಿದ್ದಾರೆ.

ವಲಸಿಗರಿಗಾಗಿ ಕಾಳಜಿ ಮತ್ತು ಪ್ರಾರ್ಥನೆ

ಮುಂದುವರೆದು ತಮ್ಮ ಸಂದೇಶದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಈ ಜಗತ್ತಿನಲ್ಲಿ ವಲಸಿಗರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಮಾತನಾಡಿ, ಅವರಿಗಾಗಿ ಮಿಡಿದಿದ್ದಾರೆ. ವಲಸಿಗರ ಕುರಿತು ಸೃಜಿಸಲಾಗಿರುವ ತಪ್ಪು ನಿರೂಪಣೆಗಳು, ಗೊಂದಲಗಳು ಅವರಿಗೆ ಘನತೆಯ ಜೀವನವನ್ನು ರೂಪಿಸಿಕೊಳ್ಳಲು ಅಡ್ಡಿಪಡಿಸುತ್ತಿವೆ ಎಂದು ಹೇಳಿದ್ದಾರೆ. ವಲಸಿಗರೂ ಸಹ ನಮ್ಮ ಸಹೋದರ ಸಹೋದರಿಯರಾಗಿದ್ದು, ಈ ಜ್ಯೂಬಿಲಿ ವರ್ಷದಲ್ಲಾದರೂ ನಾವು ಅವರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸಿ, ನೆರವಾಗೋಣ ಎಂದು ಹೇಳಿದ್ದಾರೆ.

ಈ ಭೂಮಿಯ ಮೇಲೆ ಇರುವ ಎಲ್ಲಾ ಸಂಪನ್ಮೂಲಗಳು ದೇವರ ವರದಾನವಾಗಿದ್ದು ಎಲ್ಲಾ ಮಾನವರಿಗೆ ಸೇರಿದ್ದಾಗಿದೆ. ಇವು ಕೇವಲ ಒಂದು ಗುಂಪಿಗೆ ಮಾತ್ರವಲ್ಲದ ಭೂಮಿಯ ಮೇಲಿನ ಎಲ್ಲಾ ಮಾನವರಿಗೆ ಸೇರಿದ್ದಾಗಿದೆ. ಆದುದರಿಂದ ನಾವು ಈ ಸಂಪನ್ಮೂಲಗಳನ್ನು ವಲಸಿಗರೊಂದಿಗೆ ಹಂಚಿಕೊಳ್ಳುವ ಮೂಲಕ ಅವರು ಘನತೆ ಹಾಗೂ ಗೌರವಯುತ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಸಾಲ ಮನ್ನಾದ ಕುರಿತು ಮಾತನಾಡಿ, ಶ್ರೀಮಂತ ದೇಶಗಳು ಬಡ ದೇಶಗಳಿಗೆ ನೀಡಿರುವ ಸಾಲವನ್ನು ಮನ್ನಿಸಬೇಕು. ಅಂತೆಯೇ, ಅವರು ಮರಣ ದಂಡನೆ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು ಹೇಳಿದ್ದಾರೆ. ಜೀವ ಎಂಬುದು ದೇವರ ಅತ್ಯಮೂಲ್ಯ ವರದಾನವಾಗಿದ್ದು, ಅದನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಆದುದರಿಂದ ವಿಶ್ವದ ಎಲ್ಲಾ ದೇಶಗಳಲ್ಲಿ ಮರಣ ದಂಡನೆ ಶಿಕ್ಷೆಯು ರದ್ದಾಗಬೇಕೆಂದು ಪೋಪ್ ಫ್ರಾನ್ಸಿಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

12 December 2024, 15:35