ಶಿಕ್ಷಣತಜ್ಞರಿಗೆ ಪೋಪ್: ದೈನಂದಿನ ಹೋರಾಟಗಳ ನಡುವೆಯೂ ಕ್ರಿಸ್ತರ ಮೇಲೆ ನೋಟವಿಡಿ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
"ನಾವು ಭರವಸೆಯನ್ನು ಕಳೆದುಕೊಳ್ಳದೆ ಹೇಗೆ ಅದನ್ನು ಪದೇ ಪದೇ ನವೀಕರಿಸಬಹುದು? ನಮ್ಮ ಪಯಣದಲ್ಲಿ ನಮ್ಮ ಜೊತೆಗಿದ್ದು, ನಮ್ಮ ಸಂಗಾತಿಯಾಗಿರುವ ಯೇಸುಕ್ರಿಸ್ತರ ಮೇಲೆ ನಾವು ಸದಾ ನಮ್ಮ ಗಮನವನ್ನು ಕೇಂದ್ರೀಕರಿಸುವುದರ ಮೂಲಕ ಇದನ್ನು ಮಾಡಬಹುದು" ಎಂದು ಪೋಪ್ ಫ್ರಾನ್ಸಿಸ್ ಅವರು ಕಥೋಲಿಕ ಶಿಕ್ಷಣ ತಜ್ಞರಿಗೆ ಕಿವಿಮಾತನ್ನು ಹೇಳಿದರು.
ಇಟಾಲಿಯನ್ ಕಥೋಲಿಕ ಶಿಕ್ಷಕರ ಅಸೋಸಿಯೇಷನ್ 80 ನೇ ವಾರ್ಷಿಕೋತ್ಸವದ ಹಿನ್ನೆಲೆ ಇಟಾಲಿಯನ್ ಕಥೋಲಿಕ ಪೋಷಕರು ಹಾಗೂ ಶಿಕ್ಷಕರ ಅಸೋಸೊಯೇಷನ್ನಿನ ಪ್ರತಿನಿಧಿಗಳನ್ನು ಪೋಪ್ ಫ್ರಾನ್ಸಿಸ್ ಅವರು ಬರಮಾಡಿಕೊಂಡು, ಅವರ ಜೊತೆ ಮಾತುಕತೆಯನ್ನು ನಡೆಸಿದರು.
ಪೋಪ್ ಫ್ರಾನ್ಸಿಸ್ ಅವರು ಶಿಕ್ಷಣ ತಜ್ಞರಿಗೆ ಯಾವಾಗಲೂ ತಮ್ಮ ನೋಟವನ್ನು ಕ್ರಿಸ್ತರ ಮೇಲೆ ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ. ಎಲ್ಲಾ ಸಂದರ್ಭದಲ್ಲಿ ಹಾಗೂ ಎಲ್ಲಾ ವೇಳೆಯಲ್ಲಿ ಯೇಸುವನ್ನು ಹಿಂಬಾಲಿಸಬೇಕು. ಶಾಲೆಗಳಲ್ಲಿ ರ್ಯಾಗಿಂಗ್ ಕುರಿತು ವಿಶೇಷ ಗಮನವನ್ನು ಹರಿಸಿ, ಅಂತಹ ಘಟನೆಗಳು ಎಂದಿಗೂ ನಡೆಯದಂತೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದರು.
"ದೇವರು ಮನುಷ್ಯರ ನಡುವೆ ವಾಸಿಸಿ, ಕರುಣೆ ಹಾಗೂ ಪ್ರೀತಿ ಎಂಬ ಭಾಷೆಯ ಮೂಲಕ ಅವರಿಗೆ ಹೊಸತನವನ್ನು ಕಲಿಸಿದರು. ಪ್ರಭುಕ್ರಿಸ್ತರನ್ನು ನಾವು ಮಾದರಿಯನ್ನಾಗಿಟ್ಟುಕೊಳ್ಳಬೇಕೆಂದು ಪೋಪ್ ಫ್ರಾನ್ಸಿಸ್ ಹೇಳಿದರು. "ಇಂದು ನಾವು ನಮ್ಮ ಕುಟುಂಬಗಳಲ್ಲಿ ಅಪ್ಪ, ಅಮ್ಮ ಹಾಗೂ ಮಕ್ಕಳು ತಮ್ಮದೇ ಮೊಬೈಲ್ ಫೋನುಗಳಲ್ಲಿ ನಿರತರಾಗಿದ್ದಾರೆ. ನಾವು ಒಂದೇ ಕುಟುಂಬವಾಗಿ ಪರಸ್ಪರ ಮಾತನಾಡಬೇಕು ಹಾಗೂ ಆ ಮೂಲಕ ಪ್ರೀತಿ ಹಾಗೂ ವಿಶ್ವಾಸವನ್ನು ಹಂಚಿಕೊಳ್ಳಬೇಕು ಎಂದು ಪೋಪ್ ಫ್ರಾನ್ಸಿಸ್ ಅವರಿಗೆ ಕರೆ ನೀಡಿದರು.