ನ್ಯೂ ಆರ್ಲಿಯನ್ಸ್ ಉಗ್ರ ದಾಳಿಗೆ ಮರುಗಿದ ಪೋಪ್ ಫ್ರಾನ್ಸಿಸ್
ವರದಿ: ಜೋಸೆಫ್ ಟಲ್ಲೋಚ್
ಅಮೇರಿಕಾದ ನ್ಯೂ ಆರ್ಲಿಯನ್ಸ್ ನಗರದಲ್ಲಿ ನಿನ್ನೆ ಉಗ್ರಗಾಮಿಯೊಬ್ಬ ಏಕಾಏಕಿ ಬೀದಿಯಲ್ಲಿನ ಜನರ ಮೇಲೆ ಟ್ರಕ್ ವಾಹನವನ್ನು ಹರಿಸಿದ ಪರಿಣಾಮ ಸ್ಥಳದಲ್ಲೇ 14 ಜನರು ಮೃತ ಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ನ್ಯೂ ಆರ್ಲಿಯನ್ಸ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಗ್ರೆಗರಿ ಅಯ್ಮಂಡ್ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು ಮೃತರಿಗಾಗಿ ಸಂತಾಪವನ್ನು ವ್ಯಕ್ತಪಡಿಸಿ, ಗಾಯಗೊಂಡವರಿಗೆ ಭರವಸೆ ಹಾಗೂ ಸಾಂತ್ವನವನ್ನು ವ್ಯಕ್ತಪಡಿಸಿದ್ದಾರೆ. ಮಹಾಧರ್ಮಾಧ್ಯಕ್ಷರಿಗೆ ಕಳುಹಿಸಿರುವ ವಿಶೇಷ ಟೆಲಿಗ್ರಾಂ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು "ಮೃತರನ್ನು ದೇವರ ಅನಂತ ಕರುಣೆಗೆ ಅರ್ಪಿಸುತ್ತೇನೆ" ಎಂದು ಹೇಳಿದ್ದಾರೆ.
ಈ ಟೆಲಿಗ್ರಾಂ ಸಂದೇಶಕ್ಕೆ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಸಹಿಯನ್ನು ಮಾಡಿದ್ದು, ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಇದರಿಂದ ಭಾದಿತರಾದ ಎಲ್ಲರಿಗೂ ತಮ್ಮ ಐಕ್ಯತೆಯನ್ನು ಹಾಗೂ ಸಾಮೀಪ್ಯವನ್ನು ವ್ಯಕ್ತಪಡಿಸಿದ್ದಾರೆ.
ದಾಳಿ ನಡೆಯುತ್ತಿದ್ದಂತೆ ಪೊಲೀಸರು ಹಾಗೂ ಉಗ್ರನ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರು ಉಗ್ರಗಾಮಿಯನ್ನು ಕೊಂದಿದ್ದಾರೆ. ಆದರೆ, ಇದರಲ್ಲಿ ಇನ್ನೂ ಅನೇಕ ಜನರು ಶಾಮೀಲಾಗಿರುವ ಶಂಕೆ ಇದೆ ಎಂದು ಇಲ್ಲಿನ ಪೊಲೀಸ್ ಇಲಾಖೆಯು ಹೇಳಿದೆ.