ಬದುಕನ್ನು ಪ್ರೀತಿಸಿ, ಅದನ್ನು 2025 ರಲ್ಲಿ ಮಾತೆ ಮರಿಯಮ್ಮನವರಿಗೆ ಅರ್ಪಿಸುವಂತೆ ಕರೆ ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಕ್ರಿಸ್ಟೋಫರ್ ವೆಲ್ಸ್
ಪೋಪ್ ಫ್ರಾನ್ಸಿಸ್ ಅವರು ದೇವಮಾತೆಯ ಮಹೋತ್ಸವದ ಹಿನ್ನೆಲೆಯಲ್ಲಿ ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ಸಾಂಭ್ರಮಿಕ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ವೇಳೆ ಅವರು ಜೀವನವನ್ನು ನಾವು ಪ್ರೀತಿಸಬೇಕು ಹಾಗೂ 2025 ರಲ್ಲಿ ನಾವು ಅದನ್ನು ಮಾತೆ ಮರಿಯಮ್ಮನವರಿಗೆ ಅರ್ಪಿಸಬೇಕು ಎಂದು ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ "ಮಾತೆ ಮರಿಯಮ್ಮನವರು ತಾಯಿಯಂತೆ ನಮ್ಮನ್ನು ಆಕೆಯ ಪುತ್ರ ಯೇಸು ಕ್ರಿಸ್ತರೆಡೆಗೆ ಮುನ್ನಡೆಸುತ್ತಾರೆ" ಎಂದು ಹೇಳಿದರು.
"ಮಾತೆ ಮರಿಯಮ್ಮನವರು ದೇವರ ತಾಯಿ ಎಂದು ಗೌರವಿಸಿ ಆಚರಿಸಲ್ಪಡುವ ಈ ಹಬ್ಬವು ನಮ್ಮನ್ನು ಮತ್ತೊಮ್ಮೆ ಕ್ರಿಸ್ತಜಯಂತಿಯ ಪರಮ ರಹಸ್ಯಗಳಲ್ಲಿ ಮುಳುಗುವಂತೆ ಮಾಡುತ್ತದೆ. ಸಂತ ಪೌಲರು ಇಂದಿನ ಎರಡನೇ ವಾಚನದಲ್ಲಿ ಹೇಳುವಂತೆ ದೇವರು ಮಹಿಳೆಯ ಮೂಲಕ ತಮ್ಮ ಪುತ್ರನನ್ನು ಈ ಜಗತ್ತಿಗೆ ಕಳುಹಿಸಿದರು. ಹೀಗೆ ಅವರು ದೇವಪುತ್ರನಿಗಾಗಿ ಆಯ್ಕೆ ಮಾಡಿಕೊಂಡ ಶ್ರೇಷ್ಠ ಮಹಿಳೆ ಮಾತೆ ಮರಿಯಮ್ಮನವರಾಗಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸಂತ ಪೌಲರು ಹೇಳುವಂತೆ ದೇವರು ತಮ್ಮ ಪುತ್ರನನ್ನು ಮಾನವ ರೂಪದಲ್ಲಿ ಕಳುಹಿಸಲು ನಿರ್ಧರಿಸಿದರು. ಇದರ ಅರ್ಥ ನಮಗಾಗಿ ಆವರು ಸರಳತೆಯನ್ನು ಮೆರೆದರು ಮಾತ್ರವಲ್ಲದೆ, ಮನುಷ್ಯರಿಗಾಗಿ ಅವರು ದೀನರಾದರು" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. "ಹೀಗೆ ಮನುಷ್ಯಾವತಾರವನ್ನು ತಳೆದ ಕ್ರಿಸ್ತರು ನಮಗೆ ಅವರ ಮೂಲಕ ದೇವರ ಮುಖವನ್ನು ತೋರಿಸುತ್ತಾರೆ" ಎಂದು ಪೋಪ್ ನುಡಿದರು.
"ಇಂದು ನಾವು ವಿಶ್ವ ಶಾಂತಿ ದಿನವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಮಾತೆ ಮರಿಯಮ್ಮನವರ ಹೃದಯದಲ್ಲಿರುವಂತೆ ಜೀವವನ್ನು ಪ್ರೀತಿಸಿ, ಪ್ರೋತ್ಸಾಹಿಸಬೇಕು. ಜೀವವನ್ನು ನಾವು ನಾಶ ಮಾಡಬಾರದು. ನಮ್ಮ ಜೀವಗಳನ್ನು ಇದೇ ಮಾತೆ ಮರಿಯಮ್ಮನವರಿಗೆ ಅರ್ಪಿಸಬೇಕು" ಎಂದು ಅವರು ಹೇಳಿದ್ದಾರೆ.