US-MIGRANTS-SHELTER

ದೇವರು ತಮ್ಮ ಜನತೆಯೊಂದಿಗೆ ನಡೆಯುತ್ತಾರೆ: ವಿಶ್ವ ನಿರಾಶ್ರಿತರ ದಿನ 2024 ರ ಶೀರ್ಷಿಕೆ ಘೋಷಣೆ

ವಿಶ್ವ ನಿರಾಶ್ರಿತರ ಹಾಗೂ ವಲಸಿಗರ ದಿನ 2024 ರ ಶೀರ್ಷಿಕೆಯನ್ನು ವ್ಯಾಟಿಕನ್ ಘೋಷಿಸಿದೆ. 1914 ರಿಂದ ಸಂಘರ್ಷ, ಹಿಂಸೆ ಹಾಗೂ ಆರ್ಥಿಕ ಸಂಕಷ್ಟಗಳಿಂದ ನಿರಾಶ್ರಿತರಾಗಿರುವವರು ಹಾಗೂ ವಲಸೆ ಹೋಗಿರುವವರನ್ನು ಸ್ಮರಿಸಿ ಅವರಿಗಾಗಿ ಪ್ರಾರ್ಥಿಸುವ ಅವಕಾಶವನ್ನು ಕಥೋಲಿಕರಿಗೆ ಈ ವಿಶ್ವದಿನವು ನೀಡಿದೆ.

ವರದಿ: ಜೋಸೆಫ್ ಟಲ್ಲೋಚ್

ಸಮಗ್ರ ಮಾನವ ಅಭಿವೃದ್ಧಿ ಉತ್ತೇಜನಕ್ಕಾಗಿ ಇರುವ ವ್ಯಾಟಿಕನ್ ಪೀಠವು 110ನೇ ವಿಶ್ವ ವಲಸಿಗರು ಹಾಗೂ ನಿರಾಶ್ರಿತರ ದಿನಕ್ಕೆ ಶೀರ್ಷಿಕೆಯನ್ನು ಘೋಷಿಸಿದೆ. ಈ ವರ್ಷ ಸೆಪ್ಟೆಂಬರ್ 29 ರಂದು ಆಚರಿಸಲಾಗುವ ವಿಶ್ವವಲಸಿಗರ ಹಾಗೂ ನಿರಾಶ್ರಿತರ ದಿನದ ಶೀರ್ಷಿಕೆ "ದೇವರು ತಮ್ಮ ಜನತೆಯೊಂದಿಗೆ ನಡೆಯುತ್ತಾರೆ" ಎಂಬುದಾಗಿದೆ.

ಈ ದಿನಾಂಕಕ್ಕೆ ಮುಂಚಿತವಾಗಿ ವಿಶ್ವಗುರು ಫ್ರಾನ್ಸಿಸಲು ತಮ್ಮ ಸಂದೇಶವನ್ನು ಬಿಡುಗಡೆ ಮಾಡಲಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ಈ ಪೀಠವು "ಪ್ರಸಕ್ತ ಪಯಣಿಗ ಧರ್ಮಸಭೆಯ ಪ್ರತಿನಿಧಿಗಳಾಗಿರುವ ನಮ್ಮ ವಲಸಿಗ ಸಹೋದರ ಸಹೋದರಿಯರ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸುವ ಮೂಲಕ ಈ ಸಂದೇಶವು ಧರ್ಮಸಭೆಯ ಸಂಚಾರಿ ಆಯಾಮದ ಕುರಿತು ಮಾತನಾಡುತ್ತದೆ" ಎಂದು ತಿಳಿಸಲಾಗಿದೆ.

ಈ ವಿಶ್ವ ದಿನಕ್ಕೆ 110 ವರ್ಷಗಳ ಇತಿಹಾಸ

ಪ್ರತಿ ವರ್ಷ ವಿಶ್ವ ವಲಸಿಗ ಹಾಗೂ ನಿರಾಶ್ರಿತರ ದಿನವನ್ನು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಆಚರಿಸಲಾಗುತ್ತದೆ.

ಈ ವಿಶ್ವ ದಿನವನ್ನು ಮೊದಲಿಗೆ 1914ರಲ್ಲಿ ಆರಂಭಿಸುವ ಮೂಲಕ ವಿಶ್ವದಲ್ಲಿ ಸಂಘರ್ಷ, ಹಿಂಸೆ ಹಾಗೂ ಆರ್ಥಿಕ ಸಂಕಷ್ಟಗಳಿಂದ ತಮ್ಮ ಜನ್ಮಭೂಮಿಯನ್ನು ಬಿಟ್ಟು ವಲಸಿಗರಾಗಿ ಮತ್ತು ನಿರಾಶ್ರಿತರಾಗಿ ಸಂಚರಿಸುತ್ತಿರುವ ಎಲ್ಲರನ್ನೂ ಸ್ಮರಿಸಿಕೊಂಡು ಪ್ರಾರ್ಥಿಸುವಂತೆ ಕಥೋಲಿಕರಿಗೆ ಪ್ರೋತ್ಸಾಹಿಸಲಾಯಿತು.

ಈ ವರ್ಷ ವಿಶ್ವ ವಲಸಿಗರ ಹಾಗೂ ನಿರಾಶ್ರಿತರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಗ್ರ ಮಾನವ ಅಭಿವೃದ್ಧಿ ಉತ್ತೇಜನದ ವ್ಯಾಟಿಕನ್ ಪೀಠವು ವಿಡಿಯೋಗಳು, ಮಾಹಿತಿ ಪ್ರಸರಣ ಹಾಗೂ ದೈವ ಶಾಸ್ತ್ರದ ಚಿಂತನೆಗಳ ಮೂಲಕ ಸಂವಹನ ಪ್ರಚಾರವನ್ನು ನಡೆಸಲಿದೆ.

23 February 2024, 11:38