ಧರ್ಮಸಭೆಯ ವಿಭಜನೆ ಆರೋಪ ಸಾಭೀತು; ಆರ್ಚ್'ಬಿಷಪ್ ವಿಗಾನೋ ಧರ್ಮಭ್ರಷ್ಟ ಎಂದು ಘೋಷಿಸಿದ ವ್ಯಾಟಿಕನ್
ವರದಿ: ವ್ಯಾಟಿಕನ್ ನ್ಯೂಸ್
ಈ ಹಿಂದೆ ಅಮೇರಿಕಾ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿದ್ದ ಇಟಾಲಿಯನ್ ದೇಶದ ಆರ್ಚ್'ಬಿಷಪ್ ಕಾರ್ಲೋ ಮರಿಯ ವಿಗಾನೋ ಅವರನ್ನು ವ್ಯಾಟಿಕನ್ನಿನ ವಿಶ್ವಾಸ ಪೀಠವು ಧರ್ಮಭ್ರಷ್ಟ ಎಂದು ಘೋಷಿಸಿ, ಅವರಿಗೆ ಧರ್ಮಸಭೆಯಿಂದ ಬಹಿಷ್ಕಾರ ಹಾಕಿದೆ. ಇವರ ಮೇಲೆ ಧರ್ಮಸಭೆಯ ವಿಭಜನೆಯ ಆರೋಪವಿತ್ತು.
ಕಡು ಸಂಪ್ರದಾಯವಾದಿಯಾಗಿದ್ದ ಆರ್ಚ್'ಬಿಷಪ್ ವಿಗಾನೋ ಅವರು ಪೋಪ್ ಫ್ರಾನ್ಸಿಸ್ ಅವರ ಕ್ರಮಗಳನ್ನು ತೀವ್ರವಾಗಿ ಟೀಕಿಸುತ್ತಿದ್ದರಲ್ಲದೆ, ಅಮೇರಿಕಾದ ಕಾರ್ಡಿನಲ್ ಒಬ್ಬರ ಲೈಂಗಿಕ ಹಗರಣಗಳ ಕುರಿತು ಪೋಪರಿಗೆ ಮೊದಲೇ ತಿಳಿದಿದ್ದರೂ ಅವರು ಅನೇಕ ವರ್ಷಗಳ ಕಾಲ ಆ ಕುರಿತು ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದ್ದರು. ಆದರೆ ಅವರ ಈ ಆರೋಪಗಳನ್ನು ವ್ಯಾಟಿಕನ್ ನಿರಾಕರಿಸಿತ್ತು.
ಅವರು ರೋಮ್ ನಗರದ ಧರ್ಮಾಧ್ಯಕ್ಷರೊಂದಿಗೆ ಐಕ್ಯಮತ್ಯ ಹೊಂದಿರದ ಕಾರಣ ಹಾಗೂ ಈ ಕುರಿತು ಆರೋಪಗಳಿಗೆ ಉತ್ತರಿಸಲು ವಿಚಾರಣೆಗೆ ಹಾಜರಾಗದ ಕಾರಣ ಅವರನ್ನು ತಪ್ಪಿತಸ್ಥ ಎಂದು ಘೋಷಿಸಲಾಗಿದ್ದು, ಅವರನ್ನು ಧರ್ಮಭ್ರಷ್ಟ ಎಂದು ಘೋಷಿಸಿ, ಧರ್ಮಸಭೆಯಿಂದ ಬಹಿಷ್ಕರಿಸಲಾಗಿದೆ ಎಂದು ವರದಿಯಾಗಿದೆ.