ಮಾತೆ ಮರಿಯಮ್ಮನವರ ಗಹನವಾದ ರೋಜಾಪುಷ್ಪ ಎಂಬ ಹೆಸರಿಗೆ ಭಕ್ತಿ ಆಚರಣೆಯ ಅನುಮೋದನೆ
ವರದಿ: ವ್ಯಾಟಿಕನ್ ನ್ಯೂಸ್
ಉತ್ತರ ಇಟಲಿಯ ಮೊಂತಿಚಿಯಾರಿ ಎಂಬಲ್ಲಿ ಗಹನವಾದ ರೋಜಾ ಪುಷ್ಪ ಎಂಬ ಹೆಸರಿನಲ್ಲಿ ಮಾತೆ ಮರಿಯಮ್ಮನವರಿಗೆ ನಡೆಯುತ್ತಿರುವ ಭಕ್ತಿ ಆಚರಣೆಯ ಕುರಿತು ವ್ಯಾಟಿಕನ್ನಿನ ವಿಶ್ವಾಸ ಪೀಠವು ಅನುಮೋದನೆಯನ್ನು ನೀಡಿದ್ದು ಆ ಕುರಿತು ನೂತನ ನಿಯಮಗಳು ಹಾಗೂ ಮಾರ್ಗ ಸೂಚಿಗಳನ್ನು ಪ್ರಕಟಿಸಿದೆ.
ಈ ವಿಶ್ವಾಸವನ್ನು ಪ್ರಖ್ಯಾತಿಗೊಳಿಸುತ್ತಿರುವ ಪಿಯೆರೀನಾ ಗಿಲ್ಲಿ ಎಂಬವರ ಬರಹಗಳಲ್ಲಿ ಕತೋಲಿಕ ಧರ್ಮಸಭೆಯನ್ನು ಹಾಗೂ ಅದರ ಬೋಧನೆಗಳನ್ನು ನಿರಾಕರಿಸುವ ಅಥವಾ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಯಾವುದೇ ಅಂಶಗಳು ಕಂಡು ಬರದ ಕಾರಣ, ಇದನ್ನು ಅನುಮೋದಿಸಲಾಗುತ್ತಿದೆ ಎಂದು ಅಲ್ಲಿನ ಸ್ಥಳೀಯ ಧರ್ಮಾಧ್ಯಕ್ಷ ಪಿಯೆರಂತೋನಿಯೋ ಟ್ರೆಂಬೋಲ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಈ ಭಕ್ತಿ ಆಚರಣೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಹಾಗೂ ಅದನ್ನು ಮಾಡಬೇಕಾದಾಗ ಯಾವ ಕ್ರಮಗಳನ್ನು ಹಾಗೂ ನಿಯಮಗಳನ್ನು ಅನುಸರಿಸಬೇಕೆಂದು ವಿಶ್ವಾಸ ಪೀಠವು ಸ್ಪಷ್ಟವಾಗಿ ತನ್ನ ಪತ್ರದಲ್ಲಿ ತಿಳಿಸಿದೆ. ಕೂಲಂಕುಶವಾಗಿ ಈ ಭಕ್ತಿ ಆಚರಣೆಯ ಕುರಿತು ಸಾಕಷ್ಟು ಜಿಜ್ಞಾಸೆಯನ್ನು ನಡೆಸಿದ ನಂತರ ವಿಶ್ವಾಸ ಪೀಠವು ತನ್ನ ಈ ನಿರ್ಧಾರವನ್ನು ವಿಶ್ವಗುರು ಫ್ರಾನ್ಸಿಸರ ಸಹಿ ಹಾಗೂ ಮೊಹರೊಂದಿಗೆ ಪ್ರಕಟಿಸಿದೆ.