ಒಲಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ಕ್ರೈಸ್ತರಿಗೆ ಆದ ಅಪಮಾನದ ಕುರಿತು ಖಂಡನೆಯನ್ನು ವ್ಯಕ್ತಪಡಿಸಿದ ಪವಿತ್ರ ಪೀಠ
ವರದಿ: ವ್ಯಾಟಿಕನ್ ನ್ಯೂಸ್
ಪ್ರಸ್ತುತ ಫ್ರಾನ್ಸ್ ದೇಶದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರಭು ಯೇಸುವಿನ ಕೊನೆಯ ಭೋಜನವನ್ನು ಹೋಲುವಂತಹ ರೂಪಕವನ್ನು ಮರು ಸೃಷ್ಟಿಸಲಾಗಿತ್ತು. ಈ ರೂಪಕದಲ್ಲಿ ಹಲವು ಹೆಂಗಸರಿದ್ದು, ಅವರು ಅಪಮಾನ ಮಾಡುವ ಶೈಲಿಯಲ್ಲಿ ಕೊನೆಯ ಭೋಜನದ ದೃಶ್ಯವನ್ನು ಪ್ರಸ್ತುತಪಡಿಸಿದ್ದು ಅಭಿರುಚಿಹೀನವಾಗಿತ್ತು. ಇದನ್ನು ಸಾವಿರಾರು ಜನರು ಸೇರಿದಂತೆ ಅನೇಕ ದೇಶಗಳು ಖಂಡಿಸಿದ್ದವು. ಇದೀಗ ಪವಿತ್ರ ಪೀಠವು ಇದನ್ನು ಖಂಡಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ವ್ಯಾಟಿಕನ್ ಪೀಠವು, ಇಂತಹ ಘಟನೆ ಕ್ರೈಸ್ತರಿಗೆ ಮಾಡುವ ಅಪಮಾನವಾಗಿದೆ. ಎಲ್ಲಾ ದೇಶಗಳು ಒಂದಾಗಿ ಬಂದು ಕ್ರೀಡಾ ಕೂಟಗಳ ಹಿನ್ನೆಲೆಯಲ್ಲಿ ಸಾರ್ವತ್ರಿಕ ಮೌಲ್ಯಗಳನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ರೀತಿಯ ಅಪಮಾನ ಒಂದು ಧರ್ಮಕ್ಕೆ ಮಾತ್ರವಲ್ಲ ಇಡೀ ಕ್ರೀಡಾ ಸ್ಪೂರ್ತಿಗೆ ಶೋಭೆಯನ್ನು ತರುವುದಿಲ್ಲ ಎಂದು ಹೇಳಿದೆ.
ಈ ಜಗತ್ತಿನಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಇದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಇತರರನ್ನು ಹಾಗೂ ಅವರ ನಂಬಿಕೆಗಳನ್ನು ಅಪಮಾನಿಸುವಲ್ಲಿ ಕೊನೆಗೊಳ್ಳುತ್ತದೆ. ಎಲ್ಲರನ್ನೂ ಗೌರವಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದುವುದು ಸಾರ್ವತ್ರಿಕ ಸತ್ಯವಾಗಿದ್ದು, ಇದನ್ನು ಎಲ್ಲರೂ ಅಳವಡಿಸಿಕೊಳ್ಳಲೇ ಬೇಕಿದೆ ಎಂದು ಹೇಳಿದೆ.
ಇಂತಹ ಅಭಿರುಚಿಹೀನ ಕೃತ್ಯಗಳು ಒಲಂಪಿಕ್ ನಂತಹ ದೊಡ್ಡ ಕ್ರೀಡಾ ಕಾರ್ಯಕ್ರಮಗಳಲ್ಲಿ ಹಾಗೂ ಯಾವುದೇ ವೇದಿಕೆಯಲ್ಲಿ ಮರುಕಳಿಸಬಾರದೆಂದು ಪವಿತ್ರ ಪೀಠವು ಆಶಿಸಿದೆ.