ಪೋಪರ ಪ್ರತಿನಿಧಿಯಾಗಿ ಶಾಂತಿ ಸ್ಥಾಪಿಸಲು ಮಾಸ್ಕೋ ನಗರಕ್ಕೆ ಭೇಟಿ ನೀಡಿದ ಕಾರ್ಡಿನಲ್ ಝುಪ್ಪಿ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರ ಆದೇಶದ ಮೇರೆಗೆ ಅವರ ಪ್ರತಿನಿಧಿಯಾಗಿ ಇಟಾಲಿಯನ್ ಕಾರ್ಡಿನಲ್ ಮತ್ತಿಯೋ ಝುಪ್ಪಿ ಅವರು ಉಕ್ರೇನ್ ದೇಶದಲ್ಲಿ ಶಾಂತಿಯನ್ನು ಸ್ಥಾಪಿಸುವ ಸಲುವಾಗಿ ಹಾಗೂ ಇಲ್ಲಿನ ಮಕ್ಕಳನ್ನು ಅವರು ಪೋಷಕರ ಬಳಿಗೆ ಮತ್ತೆ ಸೇರಿಸುವ ನಿಟ್ಟಿನಲ್ಲಿ ಮಾತುಕತೆಗೆ ಮಾಸ್ಕೋ ನಗರಕ್ಕೆ ಭೇಟಿ ನೀಡಿದ್ದಾರೆ.
ಇಟಲಿಯ ಬೊಲೋಗ್ನಾ ಮಹಾಧರ್ಮಕ್ಷೇತ್ರದ ಮಹಾಧರ್ಮಧ್ಯಕ್ಷರು ಹಾಗೂ ಇಟಲಿಯ ಕಥೋಲಿಕ ಧರ್ಮಾಧ್ಯಕ್ಷರ ಬಳಗದ ಅಧ್ಯಕ್ಷರೂ ಆಗಿರುವ ಕಾರ್ಡಿನಲ್ ಮತ್ತಿಯೋ ಝುಪ್ಪಿ ಅವರನ್ನು ಜೂನ್ 2023 ರಲ್ಲಿ ತಮ್ಮ ವಿಶೇಷ ಪ್ರತಿನಿಧಿಯನ್ನಾಗಿ ನೇಮಿಸಿದ್ದರು.
ವ್ಯಾಟಿಕನ್ ಮಾಧ್ಯಮ ಕಚೇರಿಯ ಮುಖ್ಯಸ್ಥರಾಗಿರುವ ಮತ್ತಿಯೋ ಬ್ರೂನಿ ಅವರ ಪ್ರಕಾರ ಈ ಕಾರ್ಯವು ಪೋಪ್ ಫ್ರಾನ್ಸಿಸ್ ಅವರ ವಿಶೇಷ ಪ್ರತಿನಿಧಿ ಅಧಿಕಾರದ ಪರಿಧಿಯಲ್ಲಿದೆ.
ಕಾರ್ಡಿನಲ್ ಝುಪ್ಪಿ ಅವರು ಮಾಸ್ಕೋ ನಗರದಲ್ಲಿ ರಷ್ಯಾದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದು, ಉಕ್ರೇನ್ ದೇಶದಲ್ಲಿ ಕದನ ವಿರಾಮ ಘೋಷಿಸುವುದೂ ಸೇರಿದಂತೆ, ಯುದ್ಧದಲ್ಲಿ ಸಿಕ್ಕಿರುವ ಮಕ್ಕಳನ್ನು ಅವರ ಪೋಷಕರಿಗೆ ಹಿಂತಿರುಗಿಸುವಂತೆ ಮನವಿ ಮಾಡಲಿದ್ದು, ಆ ಕುರಿತು ಮಾತುಕತೆಗಳನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಕಾರ್ಡಿನಲ್ ಝುಪ್ಪಿ ಅವರು ಉಕ್ರೇನ್ ದೇಶಕ್ಕೆ ಭೇಟಿ ನೀಡಿ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.