ದೌರ್ಜನ್ಯದ ವಿರುದ್ಧ ಧರ್ಮಸಭೆಯ ಹೋರಾಟದ ಕುರಿತು ಅರ್ಚ್ ಬಿಷಪ್ ಫಿಲಿಪೋ ಇಯಾನೋನೆ ಮಾತು
ವರದಿ: ಆಂದ್ರೇಯ ತೊರ್ನೆಯೆಲ್ಲಿ, ಅಜಯ್ ಕುಮಾರ್
ದೌರ್ಜನ್ಯದ ವಿರುದ್ಧ ಧರ್ಮಸಭೆಯು ಹೇಗೆ ಹೋರಾಡುತ್ತಿದೆ ಎಂಬ ಕುರಿತು ವ್ಯಾಟಿಕನ್ನಿನ ಶಾಸನಾತ್ಮಕ ದಾಖಲೆಗಳ ಪೀಠದ ಉಸ್ತುವಾರಿಯಾಗಿರುವ ಅರ್ಚ್ ಬಿಷಪ್ ಫಿಲಿಪೋ ಇಯಾನೋನೆ ಅವರು ಮಾತನಾಡಿದ್ದಾರೆ. ಈ ದೌರ್ಜನ್ಯವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಧರ್ಮಸಭೆಯು ರೂಪಿಸಿರುವ ಕಠಿಣ ಕಾನೂನುಗಳ ಕುರಿತು ಅವರು ಮಾಹಿತಿಯನ್ನು ನೀಡಿದ್ದಾರೆ.
ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಧರ್ಮಸಭೆಯು ಯಾವ ರೀತಿಯ ಕಾನೂನುಗಳನ್ನು ಒಳಗೊಂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆರ್ಚ್'ಬಿಷಪ್ ಇಯಾನೋನೆ ಅವರು, ಹೌದು ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ ಹಾಗೂ ವಿಶ್ವಗುರುಗಳೂ ಸಹ ಇದರ ಕುರಿತು ಹೆಚ್ಚಿನ ಕಾಳಜಿಯನ್ನು ಹೊಂದಿದ್ದಾರೆ. ಕಾಲಾನುಕಾಲಕ್ಕೆ ಇಂತಹ ಅಪರಾಧಗಳಿಗೆ ಕ್ಯಾನನ್ ಲಾ ನಿಯಮಗಳಿಗೆ ತಿದ್ದುಪಡಿಯನ್ನು ತರಲಾಗುತ್ತಿದೆ ಹಾಗೂ ಇಂತಹ ಅಪರಾಧಗಳನ್ನು ಮುಚ್ಚಿಡುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು ಅಪ್ರಾಪ್ತರ ಮೇಲಿನ ದೌರ್ಜನ್ಯ ಸೇರಿದಂತೆ ನೈತಿಕ ಅಧಃಪತನದಂತಹ ಯಾವುದೇ ಅಪರಾಧಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಧರ್ಮಸಭೆಯು ಎಂದಿಗೂ ಸಂತ್ರಸ್ಥರ ಪರವಾಗಿರಲಿದ್ದು, ದೌರ್ಜನ್ಯವೆಂಬ ಕೆಟ್ಟ ಅಂಶವನ್ನು ಬೇರು ಸಹಿತ ನಿರ್ನಾಮ ಮಾಡಬೇಕೆಂಬುದು ಪೋಪ್ ಫ್ರಾನ್ಸಿಸ್ ಅವರ ಅಭಿಲಾಷೆಯಾಗಿದೆ ಎಂದು ಹೇಳಿದರು.