ಕಾಂಗೋ ದೇಶದ ಪೆಂಟೆಕೋಸ್ಟಲ್ ಚರ್ಚ್ ಮೇಲೆ ದಾಳಿ; ಎಂಟು ಜನರ ದುರ್ಮರಣ
ವರದಿ: ವ್ಯಾಟಿಕನ್ ನ್ಯೂಸ್
ಜನವರಿ 30, 2024 ರಂದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಬೆನಿ ಎಂಬ ಪ್ರಾಂತ್ಯದಲ್ಲಿನ ಹಲವು ಹಳ್ಳಿಗಳ ಮೇಲೆ ನಡೆದ ದಾಳಿಯಲ್ಲಿ ಶಸ್ತ್ರ ಸಜ್ಜಿತ ದಾಳಿಕೋರರು ಎಂಟು ಜನ ನಾಗರೀಕರನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್’ನೊಂದಿಗೆ ಗುರುತಿಸಿಕೊಂಡಿರುವ “ಆ್ಯಲೈಡ್ ಡೆಮಾಕ್ರಟಿಕ್ ಫೋರ್ಸಸ್” ಎಂಬ ಗುಂಪಿನ ಕೈವಾಡವಿದೆ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಈ ದಂಗೆಕೋರರು ಮೂವತ್ತು ಜನರನ್ನು ಒತ್ತೆಯಾಳುಗಳನ್ನಾಗಿ ಅಪಹರಿಸಿದ್ದಾರೆ ಎಂಬ ಮಾಹಿತಿ ಇದೆ. ಸ್ಥಳೀಯ ಪ್ರದೇಶ ಮೇಯರ್ ಪ್ರಕಾರ “ಪೆಂಟೆಕೋಸ್ಟಲ್ ಚರ್ಚಿನಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದ ಐದು ಜನ ಬ್ರಾನ್ಮನಿಸ್ಟ್ ಕ್ರೈಸ್ತರೂ ಸೇರಿದಂತೆ ಒಟ್ಟು ಎಂಟು ಜನರನ್ನು ದಾಳಿಕೋರರ ಗುಂಪು ಹತ್ಯೆ ಮಾಡಿದೆ. ಈ ದಾಳಿಕೋರರ ಗುಂಪು ಹಳ್ಳಿಗಳ ಮೇಲೆ ದಾಳಿ ನಡೆಸಿ, ಜನರನ್ನು ಕೊಂದು, ಮನೆಗಳನ್ನು ಸುಟ್ಟುಹಾಕಿ, ದರೋಡೆ ಮಾಡುವುದಕ್ಕೆ ಕುಖ್ಯಾತಿಯನ್ನು ಗಳಿಸಿದೆ.
ಕಾಂಗೋ ದೇಶದ ನಾರ್ಥ್ ಕೀವು ಹಾಗೂ ಇಟೂರಿ ಪ್ರಾಂತ್ಯಗಳು ಕಳೆದ ನಾಲ್ಕು ವರ್ಷಗಳಿಂದ ತುರ್ತು ಪರಿಸ್ಥಿತಿಯಲ್ಲಿವೆ. ಕಳೆದ ನಾಲ್ಕು ದಶಕಗಳಲ್ಲಿ ಇಸ್ಲಾಮಿಕ್ ದಂಗೆಕೋರರ ಗುಂಪು ಅನೇಕ ಸಾವಿರ ನಾಗರೀಕರನ್ನು ಹತ್ಯೆ ಮಾಡಿದೆ. ಕಾಂಗೋ ದೇಶದ ಕಂಪಾಲ ಹಾಗೂ ಕಿನ್ಷಾಸ ಸ್ಥಳೀಯ ಸರ್ಕಾರಗಳು ಜಂಟಿ ಮಿಲಿಟರಿ ಕಾರ್ಯಾಚರಣೆಯನ್ನು ಮಾಡಿ, ಈ ದಂಗೆಕೋರರನ್ನು ಹತ್ತಿಕ್ಕಿದರೂ ಸಹ, ಈ ರೀತಿಯ ಹಲವು ದಾಳಿಗಳು ಇನ್ನೂ ನಡೆಯುತ್ತಿವೆ.