ದೆಹಲಿ ಚಲೋ: ರೈತರ ಮೇಲೆ ಆಶ್ರುವಾಯು ಸಿಡಿಸಿದ ಸರ್ಕಾರ, ಹಲವರ ಬಂಧನ
ವರದಿ: ಅಜಯ್ ಕುಮಾರ್
ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಶಂಭು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಹಲವರನ್ನು ಬಂಧಿಸಿದ್ದಾರೆ.
ರಾಜ್‌ಪುರ ಬೈಪಾಸ್ ಮೂಲಕ ಹರಿಯಾಣದ ಅಂಬಾಲಾ ಕಡೆಗೆ ಹೋಗುವುದಕ್ಕೆ ರೈತರಿಗೆ ಅನುಮತಿ ನೀಡಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್ ಭಾಗಗಳಿಂದ ಭಾರಿ ಸಂಖ್ಯೆಯ ರೈತರು ದೆಹಲಿಯತ್ತ ಧಾವಿಸುತ್ತಿದ್ದಾರೆ. ಆದರೆ, ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ತಡೆಯಲು ಸಿಂಘು, ಟಿಕ್ರಿ, ಗಾಜೀಪುರ ಗಡಿಯಲ್ಲಿ ಹಲವು ಹಂತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಸ್ತೆಗಳಿಗೆ ಅಡ್ಡಲಾಗಿ ಮುಳ್ಳು ತಂತಿ, ಮೊಳೆಗಳ ಪಟ್ಟಿ, ಸಿಮೆಂಟ್ ಇಟ್ಟಿಗೆ ಮತ್ತು ಕಂಟೈನರ್‌ಗಳನ್ನು ಇಡಲಾಗಿದೆ. ಜತೆಗೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಮತ್ತು ಅರೆಸೇನಾಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಿಂಘು ಗಡಿಯಲ್ಲಿ ವಾಣಿಜ್ಯ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹರಿಯಾಣ ಅಧಿಕಾರಿಗಳು ಅಂಬಾಲಾ, ಜಿಂದ್, ಫತೇಹಾಬಾದ್ ಮತ್ತು ಕುರುಕ್ಷೇತ್ರದಲ್ಲಿ ಗಡಿಗಳಲ್ಲಿ ಸಿಮೆಂಟ್ ಇಟ್ಟಿಗೆ, ಕಬ್ಬಿಣದ ಮೊಳೆಗಳ ಪಟ್ಟಿಗಳನ್ನು ಅಡ್ಡಲಾಗಿ ಇರಿಸುವ ಮೂಲಕ ಮೂಲಕ ನಿರ್ಬಂಧಿಸಿದ್ದಾರೆ. ಅಲ್ಲದೆ ರಾಜ್ಯದ 15 ಜಿಲ್ಲೆಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾದಲ್ಲಿ ಫೆ.13ರವರೆಗೆ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಯನ್ನು ಸ್ಥಗಿತ ಗೊಳಿಸಲಾಗಿದೆ. ಹರಿಯಾಣದ ಗಡಿ ಗ್ರಾಮಗಳ ರಸ್ತೆಗಳನ್ನೂ ಮುಚ್ಚಲಾಗಿದೆ. ದೆಹಲಿ–ರೋಹ್ಟಕ್ ಮತ್ತು ದೆಹಲಿ– ಬಹದೂರ್‌ಗಢ ರಸ್ತೆಗಳಲ್ಲಿ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.