2024.04.05 Foto ospedale saint camille haiti 2024.04.05 Foto ospedale saint camille haiti  

ಹೈಟಿ: ಹೆಚ್ಚುತ್ತಿರುವ ಮಾನವೀಯ ಭಿಕ್ಕಟ್ಟಿಗೆ ಜಾಗತಿಕ ಅನಾಸಕ್ತಿ

ಹೈಟಿ ದೇಶದಲ್ಲಿ ಶಸ್ತ್ರಸಜ್ಜಿತ ಗುಂಪುಗಳ ಆಟಾಟೋಪಗಳು ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿ ಹಿಂಸೆ ಹಾಗೂ ಅನಿಶ್ಚಿತತೆ ತಾಂಡವವಾಡುತ್ತಿದೆ. ಇಂತಹ ವಿಷಮ ಪರಿಸ್ಥಿತಿಯ ಹೊರತಾಗಿಯೂ, ಅಂತಾರಾಷ್ಟ್ರೀಯ ಸಮುದಾಯವು ಇಲ್ಲಿ ತಲೆದೋರಿರುವ ಮಾನವೀಯ ಭಿಕ್ಕಟಿನ ಕುರಿತು ಅನಾಸಕ್ತಿ ಹೊಂದಿವೆ.

ವರದಿ: ಫ್ರಾನ್ಚೆಸ್ಕ ಮರ್ಲೋ, ಅಜಯ್ ಕುಮಾರ್

ಹೈಟಿ ದೇಶದಲ್ಲಿ ಶಸ್ತ್ರಸಜ್ಜಿತ ಗುಂಪುಗಳ ಆಟಾಟೋಪಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅವರು ದಿನೇ ದಿನೇ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದುತ್ತಿದ್ದು, ಉದ್ರಿಕ್ತರಾಗುತ್ತಿದ್ದಾರೆ.

ಫಿದೆಸ್ ನ್ಯೂಸ್ ಏಜೆನ್ಸಿಯ ಪ್ರಕಾರ, ಈ ಮಾಹಿತಿಯನ್ನು ಹೈಟಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮಿಲಿಯನ್ ಸಭೆಯ ಗುರು ಫಾದರ್ ಎರ್ವಾನ್ ನೀಡಿದ್ದಾರೆ. ಇವರು ಹೈಟಿ ದೇಶದ ರಾಜಧಾನಿ ಪೋರ್ಟ್ ಅವ್ ಪ್ರಿನ್ಸ್ ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

"ನಮ್ಮನ್ನು ಆಸ್ಪತ್ರೆಯ ಒಳಗೆ ಗೃಹ ಬಂಧನದಲ್ಲಿರಿಸಿದ್ದಾರೆ. ಯಾವುದೇ ಅಗತ್ಯ ವಸ್ತುಗಳಿಗಾಗಿ ನಾವು ಹೊರಗೆ ಹೋಗುವಂತಿಲ್ಲ. ಇಲ್ಲಿ ರೋಗಿಗಳು, ವೈದ್ಯರು, ರೋಗಿಗಳ ಸಂಬಂಧಿಕರು ವಾಸಿಸುತ್ತಿದ್ದಾರೆ. ಇವರೆಲ್ಲರ ಅಗತ್ಯಗಳನ್ನು ಪೂರೈಸಲು ಕಷ್ಟವಾಗುತ್ತಿದೆ"ಎಂದು ಫಾದರ್ ಎರ್ವಾನ್ ಬರೆದುಕೊಂಡಿದ್ದಾರೆ.

ಫೋಯರ್ ಸ್ಯಾನ್ ಕಮಿಲೋ ಸಂಸ್ಥೆಯ ಆಡಳಿತಗಾರರಾಗಿರುವ ಫಾದರ್ ಎರ್ವಾನ್ ಅವರು ಹೇಳುವಂತೆ "ಇಲ್ಲಿನ ಭಯೋತ್ಪಾದಕ ಗುಂಪುಗಳು ಹಣ ಕೊಟ್ಟರಷ್ಟೇ ನಮ್ಮ ಅಗತ್ಯಗಳನ್ನು ಪೂರೈಸಲು ಅನುಮತಿ ನೀಡುತ್ತಾರೆ. ಪ್ರತಿ ಬಾರಿ, ನಾವು ಹೊರಗೆ ಹೋಗಬೇಕೆಂದರೆ ಇವರಿಗೆ ಹಣ ನೀಡಿ, ಹೋಗಬೇಕಿದೆ" ಎಂದು ಹೇಳುತ್ತಾರೆ.

"ಹೈಟಿ ದೇಶದಲ್ಲಿ ಇಷ್ಟೆಲ್ಲಾ ಮಾನವೀಯತೆ ವಿರುದ್ಧದ ಚಟುವಟಿಕೆಗಳು ನಡೆಯುತ್ತಿದ್ದರೂ ಯಾರೂ ನಮ್ಮ ಕುರಿತು ಚಿಂತಿಸುವುದಿಲ್ಲ, ನಮ್ಮ ನೆರವಿಗೆ ಬರುವುದಿಲ್ಲ. ನಾವೇ ಮೌನದಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಿದೆ" ಎಂದು "ಮಿದಿಯನ್ ಹೊರೈಜಾನ್ಸ್" ಎಂಬ ಸಂಸ್ಥೆಯ ನಿರ್ದೇಶಕರಾಗಿರುವ ಫಾದರ್ ಆಂಟೋನಿಯೊ ಮೇನೆಗೊನ್ ಹೇಳಿದ್ದಾರೆ.

ಹಲವು ರೀತಿಯ ನೈಸರ್ಗಿಕ ವಿಕೋಪಗಳು, ಶಸ್ತ್ರಸಜ್ಜಿತ ಗುಂಪುಗಳ ಹೆಚ್ಚಳ, ರಾಜಕೀಯ ಅನಿಶ್ಚಿತತೆ ಹಾಗೂ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೈಟಿ ದೇಶವು ಅಕ್ಷರಶಃ ನರಕ ಸದೃಶವಾಗಿ ಮಾರ್ಪಟ್ಟಿದೆ. ಇದರ ಬಗ್ಗೆ ಅಂತರಾಷ್ಟ್ರೀಯ ಸಮುದಾಯವೂ ಸಹ ಗಮನಹರಿಸದಿರುವುದು ಇಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

07 April 2024, 14:07