ಹುಡುಕಿ

FRANCE-BRITIAN-MIGRATION FRANCE-BRITIAN-MIGRATION  (AFP or licensors)

ಇಂಗ್ಲೀಷ್ ಕಾಲುವೆಯಲ್ಲಿ ಮುಳುಗಿ ಐವರು ವಲಸಿಗರ ಸಾವು

ಬ್ರಿಟನ್ ಸಂಸತ್ತು ಆಶ್ರಯ ಕೇಳಿ ತನ್ನ ದೇಶಕ್ಕೆ ಬಂದಿರುವ ವಲಸಿಗರನ್ನು ರವಾಂಡ ದೇಶಕ್ಕೆ ಗಡಿಪಾರು ಮಾಡಬೇಕು ಎಂಬ ಕಾನೂನಿಗೆ ಅನುಮತಿಯನ್ನು ನೀಡಿರುವ ಬೆನ್ನಲ್ಲೇ ಇಂಗ್ಲೀಷ್ ಕಾಲುವೆಯನ್ನು ದಾಟುವ ಪ್ರಕ್ರಿಯೆಯಲ್ಲಿ ಏಳು ವರ್ಷದ ಬಾಲಕಿಯು ಸೇರಿದಂತೆ ಐದು ಜನ ವಲಸಿಗರು ಮುಳುಗಿ ಮರಣ ಹೊಂದಿದ್ದಾರೆ. ಬ್ರಿಟನ್ ಸಂಸತ್ತಿನ ಈ ನಿರ್ಧಾರವನ್ನು ಕಥೋಲಿಕ ಸಂಸ್ಥೆಗಳು ವಿರೋಧಿಸಿವೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ಮಂಗಳವಾರ ಬ್ರಿಟನ್ ಸಂಸತ್ತು ಆಶ್ರಯ ಕೇಳಿ ತನ್ನ ದೇಶಕ್ಕೆ ಬಂದಿರುವ ನಿರಾಶ್ರಿತರನ್ನು ರವಾಂಡ ದೇಶಕ್ಕೆ ಗಡಿಪಾರು ಮಾಡಬೇಕು ಎಂಬ ಕಾನೂನಿಗೆ ಅನುಮತಿಯನ್ನು ನೀಡಿದೆ. 

ಈ ಸುದ್ದಿಯನ್ನು ಪ್ರಕಟಿಸಿರುವ ಬ್ರಿಟನ್ ಪ್ರಧಾನಮಂತ್ರಿ ರಿಷಿ ಸುನಕ್, ವಲಸಿಗರನ್ನು ರವಾಂಡ ದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆಯು ಇನ್ನೂ 10 ರಿಂದ 12 ವಾರಗಳಲ್ಲಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಈ ಹೊಸ ಕಾನೂನಿನ ಕುರಿತು ತಮ್ಮ ವಿರೋಧವನ್ನು ವ್ಯಕ್ತಪಡಿಸಿರುವ ಮಾನವ ಹಕ್ಕುಗಳ ಸಂಸ್ಥೆಗಳು ಇದು ಅತ್ಯಂತ ಅಮಾನವೀಯ ಕಾನೂನಾಗಿದ್ದು, ಬ್ರಿಟನ್ ದೇಶದಲ್ಲಿ ಇದನ್ನು ಕಾರ್ಯಗತವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಸುಮಾರು 300 ಜನ ವಲಸಿಗರನ್ನು ರವಾಂದ ದೇಶಕ್ಕೆ ಗಡಿಪಾರು ಮಾಡುವುದಕ್ಕೆ ಸರ್ಕಾರವು 2.2 ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ವಹಿಸಬೇಕಿದೆ ಎಂದು ಹೇಳಿದ್ದಾರೆ.

ಇಂಗ್ಲೀಷ್ ಕಾಲುವೆಯಲ್ಲಿ ದುರಂತ

ಈ ಕಾನೂನಿಗೆ ಒಪ್ಪಿಗೆ ನೀಡಿದ ಕೆಲವೇ ಗಂಟೆಗಳ ನಂತರ ಇಂಗ್ಲಿಷ್ ಕಾಲುವೆಯಲ್ಲಿ ಏಳು ವರ್ಷದ ಬಾಲಕಿಯು ಸೇರಿದಂತೆ ಐದು ಜನ ವಲಸಿದರು ನೀರಿನಲ್ಲಿ ಮುಳುಗಿ ಮೃತ ಹೊಂದಿದ್ದಾರೆ.

ಫ್ರಾನ್ಸ್ ದೇಶದಿಂದ ಹೊರಟಿದ್ದ ವಲಸಿಗರ ದೋಣಿಯು, ನೀರಿನಲ್ಲಿ ಹಲವು ಮೀಟರುಗಳು ಕ್ರಮಿಸಿದ ನಂತರ ಅದರ ಇಂಜಿನ್ ನಿಷ್ಕ್ರಿಯವಾದ ಪರಿಣಾಮ ಹಲವರು ನೀರಿನಲ್ಲಿ ಮುಳುಗಿದರು. ಕೂಡಲೇ, ಸುರಕ್ಷಿತ ಸಿಬ್ಬಂದಿ 47 ಜನರನ್ನು ಕಾಪಾಡಿದ್ದಾರೆ. ಈ ದೋಣಿಯಲ್ಲಿ ಸುಮಾರು 110 ಜನರು ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದ್ದು ಈ ಸಂಖ್ಯೆಯು ನಿಗದಿತ ಪ್ರಯಾಣಿಕರ ಸಂಖ್ಯೆಗಿಂತ ದುಪ್ಪಟ್ಟಾಗಿತ್ತು ಎಂದು ಸುದ್ದಿಗಳು ವರದಿ ಮಾಡಿವೆ.

ಧರ್ಮಸಭೆಯ ಸಂಸ್ಥೆಗಳ ವಿರೋಧ

ಬ್ರಿಟನ್ ಸಂಸತ್ತು ಜಾರಿಗೊಳಿಸಿರುವ ರವಾಂಡ ನಿರಾಶ್ರಿತರ ಕಾನೂನು ವಿರುದ್ಧ ಧರ್ಮ ಸಭೆಯ ಹಲವು ಸಂಸ್ಥೆಗಳು ವಿರೋಧವನ್ನು ವ್ಯಕ್ತಪಡಿಸಿವೆ. ಈ ಸಂಸ್ಥೆಗಳು ಧರ್ಮಸಭೆಯು ಎಲ್ಲಾ ಜನರ ಹಕ್ಕುಗಳನ್ನು ಎತ್ತಿ ಹಿಡಿಯುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಬ್ರಿಟನ್ನಿನ ಜಸ್ವಿಟ್ ರೆಫ್ಯೂಜಿ ಸರ್ವಿಸ್ ನಿರ್ದೇಶಕರಾದ ಸಾರಾ ಟೀದರ್ ಅವರು ಮಾತನಾಡಿ "ತಮ್ಮ ಸಂಸ್ಥೆಯು ನಿರಾಶ್ರಿತರನ್ನು ಗಡಿಪಾರು ಮಾಡುವ ಕಾನೂನಿನ ವಿರುದ್ಧ ಹೋರಾಡುತ್ತದೆ" ಎಂದು ಹೇಳಿದ್ದಾರೆ.

ಇಂಗ್ಲೆಂಡ್ ದೇಶದ ಸಂತ ವಿನ್ಸೆಂಟ್ ಡಿ ಪಾಲ್ ಸೊಸೈಟಿಯು ಈ ಕಾನೂನಿನ ಕುರಿತು ನಿರಾಶೆಯನ್ನು ವ್ಯಕ್ತಪಡಿಸಿ ಇದು ಮಾನವ ಘನತೆಗೆ ಹಾಗೂ ಗೌರವಕ್ಕೆ ವಿರೋಧವಾಗಿದ್ದು, ಅಮಾನವೀಯವಾಗಿದೆ ಎಂದು ಹೇಳಿದೆ.

"ನ್ಯಾಯಯುತ ಹಾಗೂ ಕರುಣೆಯುಕ್ತ ನಿರಾಶ್ರಿತರ ನೀತಿಗಳನ್ನು ರೂಪಿಸುವಂತೆ ನಾವು ಪದೇ ಪದೇ ಒತ್ತಾಯಿಸಿದ್ದೇವೆ" ಎಂದು ಹೇಳಿರುವ ಧರ್ಮಸಭೆಯ ಈ ಸಂಸ್ಥೆಯು, "ನಮ್ಮ ದೇಶಕ್ಕೆ ಬರುವ ನಿರಾಶ್ರಿತರಿಗೆ ಘನತೆ ಹಾಗೂ ಗೌರವವನ್ನು ಒದಗಿಸಬೇಕು ಹಾಗೂ ಅವರ ಅವಶ್ಯಕತೆಗಳು ಹಾಗೂ ಬೇಡಿಕೆಗಳನ್ನು ನಮ್ಮ ದೇಶದ ನಿಯಮಗಳ ಪ್ರಕಾರ ಪರಿಶೀಲಿಸಿ ಪೂರೈಸಬೇಕಿದೆ" ಎಂದು ಈ ಸಂಸ್ಥೆಯು ಹೇಳಿದೆ.

23 April 2024, 16:32