ಹವಾಮಾನ ಬದಲಾವಣೆಯ ವಿರುದ್ಧ ಸಮರ್ಪಕ ಹೋರಾಟವನ್ನು ನಡೆಸದ ಸರ್ಕಾರ: ದಕ್ಷಿಣ ಕೊರಿಯಾ ಯುವ ಸಮೂಹದ ಆರೋಪ
ವರದಿ ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ದಕ್ಷಿಣ ಕೊರಿಯ ಸರ್ಕಾರವು ಹವಮಾನ ಬದಲಾವಣೆ ಕುರಿತು ರೂಪಿಸಿರುವ "Framework Act on Low Carbon Green Growth" ಎಂಬುದು ಜಾಗತಿಕ ಹವಮಾನ ಬದಲಾವಣೆಯ ಪ್ರಮಾಣವನ್ನು ಎರಡು ಸೆಲ್ಸಿಯಸ್ ಪ್ರಮಾಣಕ್ಕಿಂತ ಕಡಿಮೆ ಮಾಡುವುದಕ್ಕೆ ಸಾಕಾಗುವುದಿಲ್ಲ ಎಂದು ದಕ್ಷಿಣ ಕೊರಿಯಾದ ಯುವಕರ ಗುಂಪು ಆರೋಪಿಸಿದೆ.
2020ರಲ್ಲಿ 19 ಜನರ ಯುವ ಗುಂಪೊಂದು ದಕ್ಷಿಣ ಕೊರಿಯಾ ಸರ್ಕಾರವು ಹವಾಮಾನ ಬದಲಾವಣೆ ಕುರಿತು ರೂಪಿಸಿರುವ ಕಾನೂನು ಸಮರ್ಪಕವಾಗಿಲ್ಲ ಹಾಗೂ ಅದು ಬದುಕುವ ಹಕ್ಕು, ನೈರ್ಮಲ್ಯ ವಾತಾವರಣದಲ್ಲಿ ಜೀವಿಸುವ ಹಕ್ಕನ್ನು ಸೇರಿದಂತೆ ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ, ಆ ಕುರಿತು ದೇಶದ ಉನ್ನತ ಸಂವಿಧಾನಿಕ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸುತ್ತಾರೆ. ಇದರ ಬೆನ್ನಲ್ಲೇ, ಮಕ್ಕಳು ಸೇರಿದಂತೆ ಹಲವು ಶಿಶುಗಳ ಪರವಾಗಿಯೂ ಪ್ರಕರಣವನ್ನು ದಾಖಲಿಸಲಾಗಿದ್ದು, ಅರ್ಜಿದಾರರ ಸಂಖ್ಯೆ 200 ಕ್ಕೂ ಹೆಚ್ಚಾಗಿದೆ.
"ಈ ಪ್ರಕರಣದ ಪ್ರಾಮುಖ್ಯತೆ ಹಾಗೂ ಅದರಲ್ಲಿನ ಸಾರ್ವಜನಿಕ ಹಿತಾಸಕ್ತಿಯನ್ನು ಈ ನ್ಯಾಯಾಲಯವು ಪರಿಗಣಿಸುತ್ತದೆ. ಅಂತೆಯೇ, ಈ ಕುರಿತು ಸರಿಯಾದ ಚರ್ಚೆಗಳು ನಡೆಯಲಿವೆ ಎಂಬುದನ್ನು ಖಾತ್ರಿಗೊಳಿಸುತ್ತದೆ" ಎಂದು ಹೇಳಿರುವ ಸಂವಿಧಾನಿಕ ನ್ಯಾಯಾಲಯದ ಅಧ್ಯಕ್ಷರಾಗಿರುವ ಕೀ ಜಂಗ್ ಸಿಯುಕ್, ಈ ಪ್ರಕರಣದಲ್ಲಿನ ಸಾರ್ವಜನಿಕ ಹಿತಾಸಕ್ತಿಯನ್ನು ನ್ಯಾಯಾಲಯ ಪರಿಗಣಿಸಿದೆ ಎಂದು ಘೋಷಿಸಿದ್ದಾರೆ.
ದಕ್ಷಿಣ ಕೊರಿಯ ಸರ್ಕಾರವು ಹವಾಮಾನ ಬದಲಾವಣೆಯ ಕುರಿತು ಸಮರ್ಪಕ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಅರ್ಜಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೂ ಮುಂಚಿತವಾಗಿ ಯುರೋಪಿನ ಅತ್ಯುನ್ನತ ನ್ಯಾಯಾಲಯವು ಜಾಗತಿಕ ಅವಮಾನ ವೈಪರಿತ್ಯದ ಕುರಿತು ಸಲ್ಲಿಸಲಾಗಿದ್ದ ಮೂರು ಅರ್ಜಿಗಳ ಪೈಕಿ ತಾಂತ್ರಿಕ ಕಾರಣಗಳನ್ನು ನೀಡಿ ಎರಡು ಅರ್ಜಿಗಳನ್ನು ವಜಾಗೊಳಿಸಿತ್ತು. ಮತ್ತೊಂದು ಅರ್ಜಿಯನ್ನು ಪುರಸ್ಕರಿಸಿದ ಈ ನ್ಯಾಯಾಲಯವು, ಅನಿಲ ಕಾರಕ ಪ್ರಮಾಣವನ್ನು ತಗ್ಗಿಸುವಲ್ಲಿ ವಿಫಲವಾದ ಪರಿಣಾಮ, ಸ್ವಿಸ್ ಮಹಿಳೆಯರ ಗುಂಪಿನ ಹಕ್ಕುಗಳನ್ನು ಸ್ವಿಜರ್ಲ್ಯಾಂಡ್ ಸರ್ಕಾರವು ಉಲ್ಲಂಘಿಸಿದೆ ಎಂದು ತೀರ್ಪು ನೀಡಿದೆ.
ಈ ಪ್ರಕರಣದ ವಿಚಾರಣೆ ಆರಂಭವಾಗುತ್ತಿರುವ ಹೊತ್ತಿನಲ್ಲಿ ನ್ಯಾಯಾಲಯದ ಹೊರಗಡೆ ಜಮಾಯಿಸಿದ ಅರ್ಜಿದಾರರ ಗುಂಪುಗಳು ಸರ್ಕಾರದ ವೈಫಲ್ಯವನ್ನು ಖಂಡಿಸಿವೆ. ಪ್ರಸ್ತುತ ತಾಪಮಾನವನ್ನು ಶೇಕಡ 1.5 ರಷ್ಟು ಪರಿಧಿಯಲ್ಲಿಡಲು ಸರ್ಕಾರಗೂ ರೂಪಿಸಿರುವ ಹವಮಾನ ಬದಲಾವಣೆ, ನಿಯಮಗಳು ಸೂಕ್ತವಲ್ಲ. ಮನುಷ್ಯರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಸರ್ಕಾರದ ಜವಾಬ್ದಾರಿಯನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.
ಇನ್ನು ಈ ಕುರಿತು ಸರ್ಕಾರದ ಪರವಾಗಿ ವಾದಿಸಿದ ವಕೀಲರು ಸರ್ಕಾರವು ಯಾರ ಕುರಿತು ತಾರತಮ್ಯವನ್ನು ಮಾಡುತ್ತಿಲ್ಲ ಹಾಗೂ ನಾಗರೀಕರ ಯಾವುದೇ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿಲ್ಲ ಎಂದು ವಾದಿಸಿದ್ದಾರೆ. ಕಾರ್ಬನ್ ಹೊರ ಸೂಸುವಿಕೆಯನ್ನು ನಿಯಂತ್ರಿಸಲು ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.