ಹುಡುಕಿ

ಚಾಡ್ ದೇಶದಲ್ಲಿ ಇಂದು ಅಧ್ಯಕ್ಷೀಯ ಚುನಾವಣೆಗಳು

ಬಂಡಾಯ ಗುಂಪುಗಳ ವಿರುದ್ಧ ಸೇನೆಯನ್ನು ಮುನ್ನಡೆಸುತ್ತಿದ್ದ ವೇಳೆ ಧೀರ್ಘಾವಧಿ ನಾಯಕ ಇದ್ರಿಸ್ ಡೆಬಿ ಸಾವನ್ನಪ್ಪಿದ ಮೂರು ವರ್ಷಗಳ ನಂತರ, ಇಂದು ಚಾಡ್ ದೇಶವು ಅಧ್ಯಕ್ಷೀಯ ಚುನಾವಣೆಗಳನ್ನು ಹಮ್ಮಿಕೊಂಡಿದೆ.

ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್

ಆಫ್ರಿಕಾದ ಸಾಹೆಲ್ ಪ್ರಾಂತ್ಯದಲ್ಲಿ ಮಿಲಿಟರಿ ಗುಂಪುಗಳ ಆಳ್ವಿಕೆಯಿಂದ ಬಿಡಿಸಿಕೊಂಡು, ಪ್ರಜಾಪ್ರಭುತ್ವದೆಡೆಗೆ ಮುನ್ನಡೆಯುತ್ತಿರುವ ಮೊದಲ ದೇಶವಾಗಿ ಚಾಡ್ ದೇಶವು ಇಂದು ಅಧ್ಯಕ್ಷೀಯ ಚುನಾವಣೆಗಳನ್ನು ಹಮ್ಮಿಕೊಂಡಿದೆ. 

ದಂಗೆಕೋರರು ಇಲ್ಲಿನ ಧೀರ್ಘಾವಧಿ ನಾಯಕ ಇದ್ರಿಸ್ ಡೆಬಿ ಅವರನ್ನು ಕೊಲ್ಲುವ ಮೂಲಕ ಸೇನೆಯು ಚಾಡ್ ದೇಶದ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿತ್ತು. ಸೋಮವಾರ ನಡೆಯುತ್ತಿರುವ ಈ ಚುನಾವಣೆಯಲ್ಲಿ ಇದ್ರಿಸ್ ಡೆಬಿ ಪುತ್ರ ಮಹಮತ್ ಇದ್ರಿಸ್ ಡೆಬಿ ಗೆಲ್ಲುವುದು ಬಹುತೇಕ ಖಚಿತವಾದರೂ ಸಹ ಅವರಿಗೆ ಮಾಜಿ ಅಧ್ಯಕ್ಷ ಸಕ್ಸೆಸ್ ಮಸ್ರ ಹಾಗೂ ಇತರ ಅಭ್ಯರ್ಥಿಗಳಿಂದ ತೀವ್ರ ಪೈಪೋಟಿ ಇದೆ.

ಚಾಡ್ ದೇಶದ ಧರ್ಮಾಧ್ಯಕ್ಷರ ಒಕ್ಕೂಟವು ಮಾಧ್ಯಮ ಹೇಳಿಕೆಯ ಮೂಲಕ ಚುನಾವಣಾ ಪ್ರಕ್ರಿಯೆಗಳು ಬಹಳ ಪಾರದರ್ಶಕತೆ ಹಾಗೂ ಶಾಂತಿಯುತವಾಗಿ ನಡೆಯುವಂತೆ, ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವಂತೆ ನಡೆಸಬೇಕೆಂದು ಸರ್ಕಾರಕ್ಕೆ ಕರೆ ನೀಡಿದ್ದಾರೆ. ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಲಿರುವ ಚುನಾವಣೆಗಳು ಸಂಜೆ ಐದು ಗಂಟೆಗೆ ಮುಕ್ತಾಯವಾಗಲಿದ್ದು, ಫಲಿತಾಂಶ ಘೋಷಣೆ ಎರಡು ವಾರಗಳ ನಂತರ ಆಗುವ ನಿರೀಕ್ಷೆ ಇದೆ. 

ಆಫ್ರಿಕಾ ಖಂಡದ ಸಾಹೆಲ್ ಪ್ರಾಂತ್ಯದಲ್ಲಿನ ಈ ದೇಶವು ತನ್ನ ನೆರೆಹೊರೆಯ ದೇಶಗಳಂತೆ ಜಿಹಾದಿಸಂ, ಮಿಲಿಟರಿ ದಂಗೆಗಳು ಹಾಗೂ ನಾಗರೀಕ ಯುದ್ಧಗಳಿಂದ ಬಸವಳಿದಿದೆ. ಇಲ್ಲಿ ತೀವ್ರ ಬರಗಾಲ, ಜಲಕ್ಷಾಮ ಹಾಗೂ ಆಹಾರಕ್ಕಾಗಿ ಹಾಹಾಕಾರ ತಾಂಡವವಾಡುತ್ತಿದೆ.     

06 May 2024, 13:49