ದಕ್ಷಿಣ ಬ್ರೆಜಿಲ್'ನಲ್ಲಿ ಭಾರಿ ಸಂಕಷ್ಟ ತಂದ ಪ್ರವಾಹ
ವರದಿ: ಜೇಮ್ಸ್ ಬ್ಲಿಯರ್ಸ್, ಅಜಯ್ ಕುಮಾರ್
ದಕ್ಷಿಣ ಬ್ರೆಜಿಲ್ ನಲ್ಲಿ ಸೋಮವಾರ ಮಳೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಮಳೆ ತನ್ನ ವೇಗವನ್ನು ಹೆಚ್ಚಿಸಿದೆ. ಅಂದಾಜಿನ ಪ್ರಕಾರ ಭಾನುವಾರದವರೆಗೂ ಸಹ ಈ ಮಳೆ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಬ್ರೆಜಿಲ್ ನ ರಿಯೋ ಗ್ರಾನ್ಡೆ ದೋ ಸುಲ್ ಎಂಬ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದು, ಇಲ್ಲಿ ಸುಮಾರು 150 ಸಮುದಾಯಗಳು ಜೀವಿಸುತ್ತಿದ್ದು, ನಗರ ಪ್ರದೇಶಗಳು ಸೇರಿದಂತೆ ಇಲ್ಲಿನ ಗ್ರಾಮಾಂತರ ಸ್ಥಳಗಳು ಸಹ ಪ್ರವಾಹದಿಂದ ಮುಳುಗಡೆಯಾಗಿವೆ.
ಇಲ್ಲಿನ ನದಿಗಳೆಲ್ಲ ತುಂಬಿ ಹೋಗಿದ್ದು, ಪ್ರವಾಹ ಸ್ಥಿತಿಯಿಂದ ಪಾರಾಗಲು ಸಾಧ್ಯವಾಗದ ಮಂದಿ ಕಟ್ಟಡಗಳ ಮೇಲೆ ಹತ್ತಿ ಜೀವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಇಲ್ಲಿನ ಜಲಾಶಯವು ಸಹ ಅರ್ಧದಷ್ಟು ನಾಶವಾಗಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಅಲ್ಲಿನ ಸ್ಥಳೀಯ ರಾಜ್ಯಪಾಲರ ಪ್ರಕಾರ ಇತಿಹಾಸದಲ್ಲೇ ಈ ಪ್ರವಾಹವು ಅತ್ಯಂತ ದೊಡ್ಡ ಮಟ್ಟದ ಪ್ರವಾಹವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸೇನಾ ತುಕಡಿಗಳು ಈ ಪ್ರದೇಶವನ್ನು ವೈಮಾನಿಕವಾಗಿ ಸಮೀಕ್ಷೆಗೆ ಒಳಪಡಿಸಿದ್ದು, ರಕ್ಷಣಾ ಕಾರ್ಯಗಳನ್ನು ತೀವ್ರಗತಿಯಲ್ಲಿ ಮಾಡುತ್ತಿವೆ.