ಮಕ್ಕಳ ಆಸ್ಪತ್ರೆಯ ಮೇಲೆ ದಾಳಿ ನಡೆದ ನಂತರ ಉಕ್ರೇನ್ ದೇಶದ ಅಧ್ಯಕ್ಷರು ಅಮೆರಿಕಾದ ನೆರವು ಬಯಸಿದ್ದಾರೆ
ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್
ಉಕ್ರೇನ್ ದೇಶದ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ ದೇಶವು ಉಕ್ರೇನ್ ದೇಶದ ದೊಡ್ಡ ಮಕ್ಕಳ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಹಿನ್ನೆಲೆ, ನ್ಯಾಟೋ ಸಭೆಯಲ್ಲಿ ಭಾಗವಹಿಸಿ, ರಷ್ಯಾದ ದರ್ಪವನ್ನು ಮುರಿಯಲು ಅಮೆರಿಕಾದ ನೆರವನ್ನು ವಿನಂತಿಸಿಕೊಂಡಿದ್ದಾರೆ.
ನ್ಯಾಟೋ ಸಭೆಗೆ ಉಕ್ರೇನ್ ಅಧ್ಯಕ್ಷರನ್ನು ದೊಡ್ಡ ನಾಯಕನಂತೆ ಬರಮಾಡಿಕೊಳ್ಳಲಾಯಿತು ಆದರೆ ಕೂಡಲೇ ಅದನ್ನು ನಿರಾಕರಿಸಿದವರು ನಿಜವಾದ ನಾಯಕರು ರಷ್ಯಾದ ವಿರುದ್ಧ ಮಂಚೂಣಿಯಲ್ಲಿ ಹೋರಾಡುತ್ತಿರುವ ನಮ್ಮ ದೇಶದ ಸೈನಿಕರಾಗಿದ್ದಾರೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ರಷ್ಯಾ ದೇಶವು ಯಾವುದೇ ನಿಯಂತ್ರಣವಿಲ್ಲದೆ ಉಕ್ರೇನ್ ದೇಶದ ಮೇಲೆ ಸದಾ ದಾಳಿಯನ್ನು ನಡೆಸುತ್ತಿದೆ. ಇತ್ತೀಚಿಗಷ್ಟೇ ಉಕ್ರೇನಿನ ಅತಿದೊಡ್ಡ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ದಾಳಿ ನಡೆಸಿದ್ದು ತನ್ನ ತಪ್ಪನ್ನು ಅದು ಒಪ್ಪಿಕೊಳ್ಳದೆ ನಿರಾಕರಿಸುತ್ತಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ ಎಂದು ಅವರು ಈ ಸಭೆಯಲ್ಲಿ ಹೇಳಿದ್ದಾರೆ.
ಎಲ್ಲಾ ರೀತಿಯಲ್ಲೂ ಮುಂದುವರೆದಿರುವ ರಷ್ಯಾ ದೇಶವನ್ನು ನಿಯಂತ್ರಿಸಲು ನಮಗೆ ಅಮೆರಿಕಾದಂತಹ ದೊಡ್ಡ ದೇಶದ ನೆರವಿನ ಅಗತ್ಯವಿದೆ. ಇದನ್ನು ಅಮೆರಿಕ ಚುನಾವಣೆಗಳಿಗಿಂತ ಮುಂಚಿತವಾಗಿ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಆದರೆ ಈ ಕುರಿತು ಉಕ್ರೇನ್ ದೇಶವು ಮಾಡಿರುವ ಎಲ್ಲಾ ಆಪಾದನೆಗಳನ್ನು ರಷ್ಯಾ ದೇಶವು ತಳ್ಳಿ ಹಾಕಿದೆ.