ವೆನೆಜುಲಾದ ಧರ್ಮಾಧ್ಯಕ್ಷರು ಮತ ಎಣಿಕೆಯಲ್ಲಿ ಪಾರದರ್ಶಕತೆಗಾಗಿ ಆಗ್ರಹಿಸಿದ್ದಾರೆ
ವರದಿ: ಜೋಸೆಫ್ ಟಲ್ಲೋಚ್, ಅಜಯ್ ಕುಮಾರ್
ಭಾನುವಾರ ವೆನೆಜುಲಾ ದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳ ವಿಷಯದಲ್ಲಿ ಸಂಘರ್ಷ ಭುಗಿಲೆದ್ದಿದೆ. ಇದಕ್ಕೆ ಮುಖ್ಯ ಕಾರಣ ಮತ ಎಣಿಕೆಯಲ್ಲಿ ಉಂಟಾಗಿರುವ ವ್ಯತ್ಯಾಸ. ಈ ಕುರಿತು ಪ್ರತಿಕ್ರಿಯಿಸಿರುವ ವೆನೆಜುಲಾ ಧರ್ಮಾಧ್ಯಕ್ಷರ ಮಂಡಳಿಯು, ಈ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಾದಿಸುತ್ತಿರುವ ಧ್ವನಿಗಳ ಜೊತೆ ನಾವೂ ಸೇರಿದ್ದೇವೆ. ಈ ಕುರಿತು ಪಾರದರ್ಶಕತೆ ಇರಬೇಕು ಎಂದು ಅಭಿಪ್ರಾಯ ಪಟ್ಟಿದೆ.
ವೆನೆಜುಲಾ ದೇಶದ ಚುನಾವಣಾ ಆಯೋಗವು ಹಾಲಿ ಅಧ್ಯಕ್ಷ ನಿಕೋಲಾಸ್ ಮಾದುರೋ ಅವರನ್ನು ಗೆದ್ದಿರುವ ಅಭ್ಯರ್ಥಿ ಎಂದು ಘೋಷಿಸಿದೆ. ಆ ಮೂಲಕ ಮೂರನೇ ಬಾರಿಗೆ ಮಾದುರೋ ಅವರು ದೇಶದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಆದರೆ ಇದನ್ನು ವಿರೋದಿಸಿರುವ ಪ್ರತಿಪಕ್ಷಗಳು ಚುನಾವಣಾ ಮತ ಎಣಿಕೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಆರೋಪಿಸಿ, ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನೆಗಳಲ್ಲಿ ಈಗಾಗಲೇ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ಕೂಲಂಕುಷವಾಗಿ ಗಮನಿಸುತ್ತಿರುವ ವೆನೆಜುಲಾ ದೇಶದ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯು, ಭಿನ್ನದನಿಗಳೊಡನೆ ನಾವಿದ್ದೇವೆ. ದೇಶದ ಚುನಾವಣೆಗಳ ಮತ ಎಣಿಕೆ ಪಾರದರ್ಶಕತೆಯಿಂದ ಕೂಡಿರಲಿ ಎಂದು ಒತ್ತಾಯಿಸಿದ್ದಾರೆ.