ಅಫ್ಗಾನ್ ಮಹಿಳೆಯರು ಸಾರ್ವಜನಿಕವಾಗಿ ಮುಖ ತೋರಿಸುವುದ ಹಾಗೂ ಮಾತನಾಡುವುದನ್ನು ನಿಷೇಧಿಸಿದ ತಾಲಿಬಾನ್
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಮಹಿಳೆಯರ ಮೇಲೆ ಈಗಾಗಲೇ ಅತ್ಯಂತ ಕಠಿಣ ನಿರ್ಬಂಧಗಳನ್ನು ಹೇರಿದೆ. ಇತ್ತೀಚೆಗೆ ಮಹಿಳೆಯರು ಮನೆಯಿಂದ ಆಚೆ ಸಾರ್ವಜನಿಕವಾಗಿ ಮುಖವನ್ನು ತೋರಿಸುವಂತಿಲ್ಲ ಹಾಗೂ ಮಾತನಾಡುವಂತಿಲ್ಲ ಎಂಬ ಕಾನೂನನ್ನು ವಿಧಿಸಿದೆ. ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯು, ಇದು ಆಫ್ಘಾನ್ ಮಹಿಳೆಯ ಧ್ವನಿಯನ್ನು ಹತ್ತಿಕ್ಕುವ ನಿರ್ಧಾರ. ಕೂಡಲೇ ತಾಲಿಬಾನ್ ಈ ಕಾನೂನನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಹೈ ಕಮಿಷನರ್ ವೋಲ್ಕರ್ ಟರ್ಕ್ ಅವರು "ತಾಲಿಬಾನಿನ ಈ ನಡೆ ಅತ್ಯಂತ ಹೇಯ ಹಾಗೂ ಕಟುವಾಗಿದೆ. ಈಗಾಗಲೇ ಅಫ್ಘಾನಿಸ್ಥಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಬಹುತೇಕ ಕಸಿದುಕೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಂತಹ ಕಾನೂನುಗಳು ಸಂಪೂರ್ಣವಾಗಿ ಮಹಿಳೆಯರನ್ನು ಸಮಾಜದಲ್ಲಿ ಇಲ್ಲವಾಗಿಸುತ್ತವೆ" ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಹೈಕಮಿಷನರ್ ಅವರ ಹೇಳಿಕೆ ಪ್ರತಿಕ್ರಿಯಿಸಿರುವ ತಾಲಿಬಾನ್ ಅವರ ಮಾತುಗಳನ್ನು ತಳ್ಳಿಹಾಕಿದೆ. ಇದು ಮಹಿಳೆಯರನ್ನು ರಕ್ಷಿಸಲು ತಾಲಿಬಾನ್ ಮಾಡುತ್ತಿರುವ ಸೇವೆ ಎಂದು ತನ್ನ ನಡೆಯನ್ನು ತಾಲಿಬಾನ್ ಸಮರ್ಥಿಸಿಕೊಂಡಿದೆ. "ಇದು ಇಸ್ಲಾಮಿಕ್ ಷರಿಯಾ ಕುರಿತು ಮಾಹಿತಿ ಇಲ್ಲದವರು ನೀಡುವ ದುರಹಂಕಾರದ ಹೇಳಿಕೆ" ಎಂದು ತಾಲಿಬಾನ್ ವಿಶ್ವಸಂಸ್ಥೆಯನ್ನು ಟೀಕಿಸಿದೆ.