ಕೇರಳ ಭೂಕುಸಿತ: ಸರ್ವಧರ್ಮಗಳೊಡನೆ ಒಂದಾಗಿ ನೆರವು ನೀಡುತ್ತಿರುವ ಧರ್ಮಸಭೆ
ವರದಿ: ಲಿಕಾಸ್ ನ್ಯೂಸ್
ಕೇರಳದಲ್ಲಿ ಇತ್ತೀಚೆಗೆ ಉಂಟಾದ ಭೂಕುಸಿತದ ಪರಿಣಾಮ ಸುಮಾರು ಐನೂರು ಜನಕ್ಕೂ ಹೆಚ್ಚಿನವರು ಮೃತ ಹೊಂದಿದ್ದು, ಸಾವಿರಾರು ಜನರು ನಿರಾಶ್ರಿತರ ಕೇಂದ್ರಗಳಲ್ಲಿ ಇದ್ದಾರೆ. ಈ ಜನರಿಗೆ ಸರ್ಕಾರವೂ ಸೇರಿದಂತೆ ನೂರಾರು ಸಂಸ್ಥೆಗಳು ನೆರವಿನ ಹಸ್ತವನ್ನು ಚಾಚಿವೆ.
ಭಾರತದ ಧರ್ಮಸಭೆ, ವಿಶೇಷವಾಗಿ ಕೇರಳದ ವಿವಿಧ ಧರ್ಮಕ್ಷೇತ್ರಗಳೂ ಸೇರಿದಂತೆ, ಧಾರ್ಮಿಕ ಸಮುದಾಯಗಳು ಹಾಗೂ ಶ್ರೀಸಾಮಾನ್ಯ ಕ್ರೈಸ್ತ ಸಂಘಟನೆಗಳು ಹಿಂದೂ ಹಾಗೂ ಮುಸ್ಲಿಂ ಧರ್ಮದ ಸಂಘ ಸಂಸ್ಥೆಗಳೊಂದಿಗೆ ಜಂಟಿಯಾಗಿ ಈ ನಿರಾಶ್ರಿತರಿಗೆ ಬೇಕಾದ ನೆರವನ್ನು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.
ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿರುವವರಿಗೆ, ವಿದ್ಯಾರ್ಥಿಗಳಿಗೆ, ಹೆಣ್ಣು ಮಕ್ಕಳಿಗೆ ಹಾಗೂ ಹಿರಿಯ ನಾಗರೀಕರಿಗೆ ಬೇಕಾದಂತಹ ಅಗತ್ಯ ವಸ್ತುಗಳನ್ನು ಹಾಗೂ ಸೇವೆಗಳನ್ನು ಕೇರಳದ ಧರ್ಮಸಭೆಯು ಮಾಡುತ್ತಿದೆ. ಹಲವಾರು ಕ್ರೈಸ್ತ ಶಾಲಾ-ಕಾಲೇಜುಗಳು ಹಾಗೂ ಚರ್ಚುಗಳನ್ನು ತಾತ್ಕಲಿಕ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ ಎಂಬುದನ್ನು ವ್ಯಾಟಿಕನ್ ನ್ಯೂಸ್ ಈ ಹಿಂದೆ ವರದಿ ಮಾಡಿತ್ತು.