ಬಾಂಗ್ಲಾದೇಶದ ಮಧ್ಯಂತರ ಪ್ರಧಾನಿಯಾಗಿ ಮಹಮದ್ ಯೂನುಸ್
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಪ್ರಧಾನಮಂತ್ರಿ ಶೇಖ್ ಹಸೀನಾ ಅವರ ಬಲವಂತದ ರಾಜೀನಾಮೆಯ ನಂತರ ಬಾಂಗ್ಲಾದೇಶದ ಮಧ್ಯಂತರ ಪ್ರಧಾನಮಂತ್ರಿಯಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮದ್ ಯೂಸುಫ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ತಮ್ಮ ಸಣ್ಣ ಉದ್ದಿಮೆ ಹಾಗೂ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯ ಸಾಧನೆಗಾಗಿ ೨೦೦೬ ರಲ್ಲಿ ಮೊಹಮದ್ ಯೂನುಸ್ ಅವರಿಗೆ ನೊಬೆಲ್ ಪ್ರಶಸ್ತಿ ಸಂದಿದೆ. ಬಾಂಗ್ಲಾದೇಶದ ಮಾಜಿ ಅಧ್ಯಕ್ಷೆ ಶೇಖ್ ಹಸೀನಾ ಅವರ ಪ್ರಬಲ ಟೀಕಾಕಾರರಲ್ಲೊಬ್ಬರಾಗಿರುವ ಯೂನುಸ್ ಅವರು ಇದೀಗ ಶೇಖ್ ಹಸೀನಾ ಅವರು ಬಲವಂತದಿಂದ ರಾಜೀನಾಮೆಯನ್ನು ನೀಡಿದ ನಂತರ, ಬಾಂಗ್ಲಾದೇಶದ ಮಧ್ಯಂತರ ಪ್ರಧಾನಮಂತ್ರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಇದೀಗ ದೇಶದಲ್ಲಿ ನೂತನ ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸಿ, ಹೊಸ ಸರ್ಕಾರವು ಆಯ್ಕೆಯಾಗುವವರೆಗೂ ಇವರು ಈ ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇತ್ತೀಚಿಗಷ್ಟೇ ಬಾಂಗ್ಲಾದೇಶದಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು. ಈ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಪೊಲೀಸರು ಸೇರಿದಂತೆ ನೂರಾರು ಜನರು ಮೃತಹೊಂದಿದ್ದಾರೆ. ಸಾವಿರಾರು ಜನರನ್ನು ಈ ಪ್ರತಿಭಟನೆಗಳ ಹಿನ್ನೆಲೆ ಬಂಧಿಸಲಾಗಿತ್ತು. ಶೇಖ್ ಹಸೀನಾರ ಪಕ್ಷ ಅವಾಮಿ ಲೀಗ್ ಸಂಪರ್ಕ ಹೊಂದಿರುವವರಿಗೆ ಮಾತ್ರ ಸರ್ಕಾರಿ ಕೆಲಸಗಳು ದೊರೆಯುತ್ತಿವೆ ಎಂಬುದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಆರಂಭಿಸಿದ್ದರು.