ಹೈಟಿ ದೇಶದಲ್ಲಿ ಮಾನವೀಯ ಪರಿಸ್ಥಿತಿ ಹತಾಶಮಯವಾಗಿದೆ
ವರದಿ: ಲೀಸಾ ಝೇಂಗಾರಿನಿ, ಅಜಯ್ ಕುಮಾರ್
ಹೈಟಿ ದೇಶದ ಕೇಪ್ ಹೈಟಿ ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಲೋನೆ ಸತುರ್ನೆ ಅವರ ಪ್ರಕಾರ ವಿಶ್ವಸಂಸ್ಥೆಯ ಶಾಂತಿ ಸ್ಥಾಪಕ ಪಡೆಗಳು ಹೈಟಿಗೆ ಬಂದರೂ ಸಹ ಇಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿಲ್ಲ. ದಿನೇ ದಿನೇ ಇಲ್ಲಿನ ಮಾನವೀಯ ಪರಿಸ್ಥಿತಿ ದುಸ್ತರವಾಗುತ್ತಿದೆ.
ವಿಶ್ವಸಂಸ್ಥೆಯು ಕೀನ್ಯಾ ದೇಶದಿಂದ ಶಾಂತಿ ಸ್ಥಾಪಕ ಪಡೆಗಳನ್ನು ಹೈಟಿ ದೇಶಕ್ಕೆ ಕಳುಹಿಸಿದರು ಸಹ ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿಲ್ಲ. ದಿನೇ ದಿನೇ ಗ್ಯಾಂಗ್ ವಾರ್ಗಳು ಹೆಚ್ಚುತ್ತಿದ್ದು, ಅಶಾಂತಿ ನಿರ್ಮಾಣವಾಗಿದೆ. ಇಡೀ ವಿಶ್ವದಲ್ಲಿ ಹೈಟಿ ದೇಶವು ಅತ್ಯಂತ ಬಡದೇಶಗಳಲ್ಲಿ ಒಂದಾಗಿದ್ದು, ಜನತೆ ಪ್ರತಿದಿನ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ನಮ್ಮ ಕುಟುಂಬಗಳನ್ನು ಹಸಿವಿನಿಂದ ಕಾಪಾಡಲು ಹೆಣಗಾಡುತ್ತಿದ್ದಾರೆ. ದಿನೇ ದಿನೇ ಅಭದ್ರತೆಯಲ್ಲಿ ಜೀವನವನ್ನು ಇಲ್ಲಿನ ಜನತೆ ಕಳೆಯುತ್ತಿದ್ದಾರೆ.
ಹೈಟಿ ದೇಶದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹಾಗೂ ಅಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಲು ವಿಶ್ವಸಂಸ್ಥೆಯು ಕೀನ್ಯಾ ಸೇರಿದಂತೆ ವಿವಿಧ ದೇಶಗಳಿಂದ ಇಲ್ಲಿಗೆ ಶಾಂತಿ ಸ್ಥಾಪಕ ಮಿಲಿಟರಿ ಪಡೆಗಳನ್ನು ಕಳುಹಿಸಿತ್ತು. ಆದರೆ ಈ ಮಿಲಿಟರಿ ಪಡೆಗಳ ಕಾರ್ಯಾಚರಣೆಯ ಹೊರತಾಗಿಯೂ ಸಹ ಹೈಟಿ ದೇಶದ ಪರಿಸ್ಥಿತಿ ವಿಭಿನ್ನವಾಗಿಲ್ಲ. ಇಲ್ಲಿ ನಡೆಯುತ್ತಿರುವ ಹಲವು ಹಿಂಸಾತ್ಮಕ ಗುಂಪುಗಳ ಅಂತರ್ ಯುದ್ಧದ ಪರಿಣಾಮ ಸುಮಾರು ಏಳು ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಇದಲ್ಲದೆ ದೊಡ್ಡ ಸಂಖ್ಯೆಯ ಜನರು ಅಕ್ಕಪಕ್ಕದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.