ಲೆಬಾನನ್: ಇಸ್ರೇಲ್ ದಾಳಿಗೆ ಸಾವನ್ನಪ್ಪುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆ
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಇಸ್ರೇಲ್ ದೇಶವು ಬೈರೂತ್ ನಗರದ ಮೇಲೆ ನಡೆಸುತ್ತಿರುವ ದಾಳಿಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಮಕ್ಕಳು ಸಾವನ್ನಪ್ಪುವ ಸಂಭವ ಹೆಚ್ಚಿದೆ. ಈ ದಾಳಿಗಳಿಂದ ಮಕ್ಕಳು ಹೆಚ್ಚಾಗಿ ಸಾವನ್ನಪ್ಪುತ್ತಾರೆ ಎಂದು ಯೂನಿಸೆಫ್ ಸಂಸ್ಥೆಯು ಕಳವಳವನ್ನು ವ್ಯಕ್ತಪಡಿಸಿದೆ. ಇಸ್ರೇಲ್ ದಾಳಿ ನಡೆಸಿದ ನಂತರ ಜನರು ತಮ್ಮ ನಿವಾಸಗಳನ್ನು ತೊರೆದು ಓಡುತ್ತಿದ್ದು, ನಿರಾಶ್ರಿತರಿಗೆಂದೇ ಸ್ಥಾಪಿಸಲಾಗಿರುವ ಸುಮಾರು 900 ಪರಿಹಾರ ಕೇಂದ್ರಗಳು ಈಗಾಗಲೇ ಬಹುತೇಕ ಭರ್ತಿಯಾಗಿವೆ. ಜನರು ಮನೆಗಳಲ್ಲಿ ತಂಗಲು ನಿರಾಕರಿಸುತ್ತಿದ್ದು, ತೆರೆದ ಪ್ರದೇಶಗಳಲ್ಲಿ ನಿದ್ರಿಸುತ್ತಿದ್ದಾರೆ.
ಈ ದಾಳಿಗಳ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಯೂನಿಸೆಫ್ ಇಸ್ರೇಲ್ ಬೈರೂತ್ ನಗರದ ಮೇಲೆ ದಾಳಿ ಮಾಡಲು ಆರಂಭಿಸಿದ ದಿನಂದಿದ ಈವರೆಗೂ ಸಹ ಸುಮಾರು 127 ಮಕ್ಕಳು ಮೃತಹೊಂದಿದ್ದು, ನೂರಾರು ಮಕ್ಕಳು ಗಾಯಾಳುಗಳಾಗಿದ್ದಾರೆ ಎಂದು ವರದಿ ಮಾಡಿದೆ. ದಾಳಿ ಹೆಚ್ಚಾದಂತೆ ಮಕ್ಕಳ ಸಾವಿನ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ ಎಂದು ಯೂನಿಸೆಫ್ ಈ ದಾಳಿಗೆ ತನ್ನ ಖಂಡನೆಯನ್ನು ವ್ಯಕ್ತಪಡಿಸಿದೆ.
ಯೂನಿಸೆಫ್'ನ ಪ್ರಾಂತೀಯ ನಿರ್ದೇಶಕಿ ಅಡೆಲೇಡ್ ಕೋಡರ್ ಅವರು ಈ ದಾಳಿಗಳ ಕುರಿತು ಮಾತನಾಡಿ "ಗಾಯಗೊಂಡಿರುವ ಮಕ್ಕಳ ಕುರಿತು ವೈದ್ಯರು ಹೇಳುವ ಪ್ರಕಾರ, ಅವರಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಿದೆ. ಏಕೆಂದರೆ ಬಹುತೇಕ ಮಕ್ಕಳಿಗೆ ಗಾಯಗಳಾಗಿದ್ದು, ಮೂಳೆಗಳು ಮುರಿದುಹೋಗಿವೆ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಅವರು ಗಾಯಾಳುಗಳಾಗಿದ್ದಾರೆ." ಎಂದು ಅವರು ಹೇಳಿದ್ದಾರೆ.
ಬೈರೂತ್ ನಗರದ ಮೇಲೆ ಹೆಚ್ಚು ಹೆಚ್ಚು ದಾಳಿ ಆಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಕ್ಷೇತ್ರ ಕುಸಿಯುವ ಹಂತದಲ್ಲಿದೆ ಏಕೆಂದರೆ ಯುದ್ಧದ ಪರಿಣಾಮ ಅಗತ್ಯ ಆರೋಗ್ಯ ಪರಿಕರಗಳ ಸರಬರಾಜು ನಿಂತುಹೋಗಿದೆ. ವೈದ್ಯರು, ದಾದಿಯರೂ ಸಹ ಮಾನಸಿಕವಾಗಿ ಕುಗ್ಗಿದ್ದು, ಇದು ಅವರು ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ ಎಂದು ಹೇಳಲಾಗಿದೆ.