ಲೆಬಾನನ್'ನಿಂದ ಸಿರಿಯಾಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ
ವರದಿ: ವ್ಯಾಟಿಕನ್ ನ್ಯೂಸ್
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಈ ತಿಂಗಳು ಉಲ್ಬಣಿಸಿದಂದಿನಿಂದ 1 ಲಕ್ಷಕ್ಕೂ ಅಧಿಕ ಮಂದಿ ಲೆಬನಾನ್ ಗಡಿ ದಾಟಿ ಸಿರಿಯಾ ತಲುಪಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಂದಿ ಲೆಬನಾನ್‍ನ ಒಳಗೆ ಸ್ಥಳಾಂತರಗೊಂಡಿದ್ದಾರೆ ಎಂದು ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್‍ಎಚ್‍ಸಿಆರ್ ಮುಖ್ಯಸ್ಥ ಫಿಲಿಪ್ಪೋ ಗ್ರಾಂಡಿ ಹೇಳಿದ್ದಾರೆ.
ಹೀಗೆ ಗಡಿ ದಾಟುತ್ತಿರುವವರಲ್ಲಿ ಲೆಬನಾನ್ ಹಾಗೂ ಸಿರಿಯಾ ಎರಡೂ ದೇಶಗಳ ಪ್ರಜೆಗಳಿದ್ದಾರೆ. ನಾಲ್ಕು ಗಡಿದಾಟುಗಳ ಮೂಲಕ ಸ್ಥಳಾಂತರಗೊಳ್ಳುವವರಿಗೆ ಯುಎನ್‍ಎಚ್‍ಸಿಆರ್ ನೆರವಾಗುತ್ತಿದೆ ಎಂದವರು ಹೇಳಿದ್ದಾರೆ. ಯುದ್ಧಪೀಡಿತ ಸಿರಿಯಾಕ್ಕೆ ಸೆಪ್ಟಂಬರ್ 23ರಿಂದ ಸಾಮೂಹಿಕ ಸ್ಥಳಾಂತರ ಆರಂಭಗೊಂಡಿದೆ. ನಾಲ್ಕು ಗಡಿದಾಟುಗಳಲ್ಲಿ ಸಿರಿಯಾದ ರೆಡ್‍ಕ್ರೆಸೆಂಟ್ ಸಂಸ್ಥೆ, ಸ್ಥಳೀಯ ಅಧಿಕಾರಿಗಳ ಜತೆ ಯುಎನ್‍ಎಚ್‍ಸಿಆರ್ ಸಿಬ್ಬಂದಿಗಳು ಗಡಿದಾಟಿ ಬರುವವರಿಗೆ ನೆರವಾಗುತ್ತಿದ್ದಾರೆ ಎಂದು ಫಿಲಿಪ್ಪೋ ಗ್ರಾಂಡಿ ಹೇಳಿದ್ದಾರೆ.
ಸ್ಥಳಾಂತರಗೊಂಡಿರುವವರಲ್ಲಿ ಸುಮಾರು 80%ದಷ್ಟು ಸಿರಿಯಾ ಪ್ರಜೆಗಳು ಮತ್ತು 20%ದಷ್ಟು ಲೆಬನಾನ್ ಪ್ರಜೆಗಳು. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳಾಂತರಗೊಂಡ ಮಕ್ಕಳಲ್ಲಿ 50%ದಷ್ಟು ಹದಿಹರೆಯದವರು. 13 ವರ್ಷದಿಂದ ಆಂತರಿಕ ಬಿಕ್ಕಟ್ಟು ಮತ್ತು ಹಿಂಸಾಚಾರದಿಂದ, ಆರ್ಥಿಕ ಕುಸಿತದಿಂದ ಬಳಲುತ್ತಿರುವ ಸಿರಿಯಾ ಈಗ ಸಾಮೂಹಿಕ ಸ್ಥಳಾಂತರದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲೆಬನಾನ್‍ನಲ್ಲಿ ಬಾಂಬ್ ದಾಳಿಯಿಂದ ಪಲಾಯನ ಮಾಡುವ ಜನರು ಬಳಲಿ, ಆಘಾತಕ್ಕೊಳಗಾಗಿ ಮತ್ತು ಸಹಾಯದ ಹತಾಶ ಅಗತ್ಯದಲ್ಲಿ ಸಿರಿಯಾಕ್ಕೆ ಧಾವಿಸುತ್ತಿದ್ದಾರೆ ಎಂದು ಯುಎನ್‍ಎಚ್‍ಸಿಆರ್ ಸಿರಿಯಾ ಪ್ರತಿನಿಧಿ ಗೊಂಜಾಲೊ ವರ್ಗಾಸ್ ಲ್ಲೋಸ ಹೇಳಿದ್ದಾರೆ.