ಕುಟುಂಬಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಗಾಝಾದ ಮೀನುಗಾರ ಸಮುದಾಯ
ವರದಿ: ರಾಯಟರ್ಸ್ ವಿಶೇಷ ವರದಿ
ಒಂದು ವರ್ಷವಾದರೂ ನಿಲ್ಲದ ಯುದ್ಧದ ಕಾವು, ನಿತ್ಯ ಕಾಡುವ ಘೋರ ಹಸಿವಿನ ನೋವಿನೊಂದಿಗೆ ಸಮುದ್ರ ದಡದಲ್ಲಿ ಒಟ್ಟು ಸೇರಿರುವ ಪ್ಯಾಲೆಸ್ಟೀನಿನ ಬೆಸ್ತರು, ಸಾಕಷ್ಟು ಮೀನು ಸಿಗಬಹುದೆಂಬ ಆಸೆಯಲ್ಲಿ ಬಲೆ ಎಸೆಯುತ್ತಾರೆ. ಹತಾಶೆ ತುಂಬಿದ ಕಂಗಳಲ್ಲಿ ತಮ್ಮ ಕುಟುಂಬಗಳಿಗೆ ಬೇಕಾದಷ್ಟು ಮೀನು ಸಿಗಬಹುದು ಎನ್ನುವ ಭರವಸೆಯೂ ಇದೆ.
2023 ಅಕ್ಟೋಬರ್‌ನಲ್ಲಿ ಹಮಾಸ್ ಬಂಡುಕೋರರು ತನ್ನ ಮೇಲೆ ದಾಳಿ ಮಾಡಿದ ಬಳಿಕ, ಗಾಜಾ ವಿರುದ್ಧ ಇಸ್ರೇಲ್ ಯುದ್ಧ ಸಾರಿದೆ. ಇದು ಅಲ್ಲಿನ ಮೀನುಗಾರರ ಜೀವನವನ್ನು ದುಸ್ತರವಾಗಿಸಿದೆ. ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡಲಾಗದೆ, ದಡದಿಂದಲೇ ಬಲೆ ಎಸೆಯುತ್ತಿದ್ದಾರೆ.
ಯುದ್ಧದಿಂದ ನಿರಾಶ್ರಿತರಾಗಿ ಖಾನ್ ಯೂನಿಸ್‌ನ ಸಮುದ್ರ ತಟದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಡೇರೆಗಳಲ್ಲಿ ವಾಸಿಸುತ್ತಿರುವ 71 ವರ್ಷದ ಇಬ್ರಾಹಿಂ ಫುರಾಬ್ ಹಾಗೂ 24 ವರ್ಷದ ವಸೀಂ ಅಲ್ ಮಸ್ತ್ರಿ ಬಲೆ ಎಸೆದು ಬೂತಾಯಿ ಮೀನಿಗಾಗಿ ಅರಸುತ್ತಿದ್ದರು.
'ಬದುಕು ಕಷ್ಟವಾಗಿದೆ' ಮಾತಿಗೆ ನಿಂತರು ಫುರಾಬ್. 'ಆಹಾರ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ನಮಗೆ ಯಾವ ಸಹಾಯವೂ ಇಲ್ಲ. ನಮಗೆ ಏನೂ ಸಿಗುತ್ತಿಲ್ಲ. ಆರಂಭದಲ್ಲಿ ನಮಗೆ ಇಂದಿಷ್ಟು ಆಹಾರ ಸಿಗುತ್ತಿತ್ತು, ಆದರೆ ಈಗ ಅದೂ ಸಿಗುತ್ತಿಲ್ಲ' ಫುರಾಬ್ ಮಾತಿನಲ್ಲಿ ನೋವಿತ್ತು.
ಫುರಾಬ್ ಮತ್ತು ಮಸಿಯಂತಹ ಮೀನುಗಾರರು ತಮ್ಮ ಕುಟುಂಬಗಳಿಗೆ ಬೇಕಾದಷ್ಟು ಮೀನುಗಳನ್ನು ತರಲು ಪ್ರತಿದಿನ ಹೆಣಗಾಡುತ್ತಾರೆ. ಸ್ವಂತ ಬಳಕೆಗೆ ಮಿಕ್ಕಿ ಬೇರೆಯವರಿಗೆ ಮಾರಲು ಸಿಕ್ಕರೆ ಅದೃಷ್ಟ.
ಯುದ್ಧಕ್ಕಿಂತ ಮುಂಚೆ ಗಾಜಾದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಕಸುಬಾಗಿತ್ತು. ನಿತ್ಯ ಆಹಾರದ ಭಾಗವಾಗಿದ್ದ ಮೀನು, ಆದಾಯದ ಪ್ರಮುಖ ಮೂಲವಾಗಿತ್ತು. ಸಮುದ್ರದಿಂದ ಹಿಡಿದು ತಂದ ಮೀನುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗಿಡಲಾಗುತ್ತಿತ್ತು.
ಆದರೆ ಈಗ ಮೀನುಗಾರಿಕೆಗೆ ಇಸ್ರೇಲ್ ದಿಗ್ವಂಧನ ವಿಧಿಸಿದ್ದಲ್ಲದೆ, ಪದೇ ಪದೇ ನಡೆಯುತ್ತಿರುವ ದಾಳಿಯಿಂದಾಗಿ ಹಲವು ಮಂದಿಯ ಆದಾಯ ಮೂಲ ನಿಂತು ಹೋಗಿದೆ. ನಿತ್ಯದ ಅಗತ್ಯ ವಸ್ತುಗಳೂ ಸಿಗುತ್ತಿಲ್ಲ.
'ನಮಗೆ ಆದಾಯವೂ ಇಲ್ಲ, ನಮ್ಮ ಜೀವನವೂ ಅಪಾಯದಲ್ಲಿದೆ' ಎಂದು ಇಸ್ರೇಲ್ ಪಡೆಗಳು ಸಮುದ್ರದಿಂದ ಮೀನುಗಾರರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಯನ್ನು ವಿವರಿಸಿದರು ಮಸ್ತಿ.
'ಖಾನ್ ಯೂನಿಸ್‌ನಲ್ಲಿರುವ ನಮ್ಮ ಮೀನುಗಾರಿಕಾ ದೋಣಿಯ ಮೇಲೆಯೇ ಇಸ್ರೇಲ್ ಪಡೆಗಳು ದಾಳಿ ನಡೆಸಿವೆ' ಎಂದರು ಫುರಾಬ್.
ಮೀನುಗಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆಯೇ ಎನ್ನುವ 'ರಾಯಿಟರ್ಸ್' ಕೇಳಿದ ಪ್ರಶ್ನೆಗೆ ಇಸ್ರೇಲ್ ಸೇನೆಯಿಂದ ಯಾವುದೇ ಉತ್ತರ ಬಂದಿಲ್ಲ.