ಗಾಝಾದಾದ್ಯಂತ ಇಸ್ರೇಲ್ ದಾಳಿ, ಹಲವರ ಮರಣ
ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್
ಕದನ ವಿರಾಮದ ಜಾಗತಿಕ ಆಗ್ರಹ, ವಿಶ್ವಸಂಸ್ಥೆಯ ಹಲವು ನಿರ್ಣಯಗಳು ಮತ್ತು ವಿವಿಧ ರಾಷ್ಟ್ರಗಳ ಮಧ್ಯಸ್ಥಿಕೆಯ ಮಾತುಕತೆಗಳ ಹೊರತಾಗಿಯೂ ಗಾಝಾ ಮತ್ತು ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಮಾರಣಹೋಮ ಮುಂದುವರೆಸಿದೆ.
ಇಂದು (ನ.2) ಅಲ್-ಜಝೀರಾ ಪ್ರಕಟಿಸಿರುವ ವರದಿಯ ಪ್ರಕಾರ, ಉತ್ತರ ಗಾಝಾದ ವಸತಿ ಕಟ್ಟಡಗಳ ಮೇಲೆ ಎರಡು ವಾಯುದಾಳಿಗಳನ್ನು ಮಾಡಿರುವ ಇಸ್ರೇಲ್, 50 ಮಕ್ಕಳು ಸೇರಿದಂತೆ 84 ಜನರನ್ನು ಹತ್ಯೆ ಮಾಡಿದೆ.
ಈ ನಡುವೆ, ಇಸ್ರೇಲ್‌ಗೆ ಯುದ್ದ ನೌಕೆಗಳು, ಫೈಟರ್ ಜೆಟ್‌ಗಳು, ಬಾಂಬ್ ಸೇರಿದಂತೆ ವಿವಿಧ ರೀತಿಯ ಶಸ್ತ್ರಾಗಳ ಪೂರೈಕೆಯನ್ನು ಅಮೆರಿಕ ಹೆಚ್ಚಿಸಿದೆ ಎಂದು ವರದಿ ಹೇಳಿದೆ.
ತೀವ್ರ ಆಕ್ರಮಣದ ನಡುವೆಯೂ ಗಾಝಾ ಜನತೆಗೆ ಮಾನವೀಯ ನೆರವು ಒದಗಿಸುತ್ತಿರುವ ಸ್ವಯಂ ಸೇವಕರು, ಅಲ್ಲಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮದ ಮೂರನೇ ಹಂತವನ್ನು ಪುನರಾರಂಭಿಸಲು ನಿರ್ಧರಿಸಿದ್ದಾರೆ. ಇದು ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿತ್ತು.
ಅಕ್ಟೋಬರ್ 7, 2024ರಿಂದ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಲ್ಲಿ ಸಾವನ್ನಪ್ಪಿದ್ದ ಗಾಝಾದ ಜನತೆಯ ಸಂಖ್ಯೆ ಪ್ರಸ್ತುತ 43,259ಕ್ಕೆ ತಲುಪಿದೆ. 101,827 ಜನರು ಗಾಯಗೊಂಡಿದ್ದಾರೆ.
ಲೆಬನಾನ್‌ನಲ್ಲೂ ಮುಂದುವರಿದ ಆಕ್ರಮಣ
ಗಾಝಾದ ಜೊತೆಗೆ ಅತ್ತ ಲೆಬನಾನ್‌ನಲ್ಲೂ ಇಸ್ರೇಲ್ ತನ್ನ ಆಕ್ರಮಣ ಮುಂದುವರೆಸಿದೆ. ಪರಿಣಾಮ ಇದುವರೆಗೆ 2,897 ಜನರು ಸಾವನ್ನಪ್ಪಿದ್ದು, 13,150 ಮಂದಿ ಗಾಯಗೊಂಡಿದ್ದಾರೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಸುಮಾರು 30 ಮಂದಿಯನ್ನು ಇಸ್ರೇಲ್ ಹತ್ಯೆ ಮಾಡಿದೆ.