ಇಸ್ರೇಲ್-ಪ್ಯಾಲೆಸ್ತೀನ್ ನಡುವಣ ಶಾಂತಿ ಸ್ಥಾಪಿಸುವ ಹಿನ್ನೆಲೆ ಇಬ್ಬರಿಗೆ ಭಾರತ ಶಾಂತಿ ಪ್ರಶಸ್ತಿ
ವರದಿ: ವ್ಯಾಟಿಕನ್ ನ್ಯೂಸ್, ವಿವಿಧ ಸುದ್ದಿ ಸಂಸ್ಥೆಗಳು
ಶಾಂತಿ ಸ್ಥಾಪನೆ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿಗಾಗಿ ನೀಡಲಾಗುವ 2023ರ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿಯನ್ನು ಮಂಗಳವಾರ ಡೇನಿಯಲ್ ಬರೇನ್‌ಬಾಯಿಮ್ ಮತ್ತು ಅಲಿ ಅಬು ಅವ್ವದ್‌ರಿಗೆ ಪ್ರದಾನ ಮಾಡಲಾಗಿದೆ. ಸಂಗೀತ, ಸಂಭಾಷಣೆ ಮತ್ತು ಜನರ ಭಾಗವಹಿಸುವಿಕೆ ಮುಂತಾದ ಅಹಿಂಸಾ ಸಾಧನಗಳ ಮೂಲಕ ಇಸ್ರೇಲ್ ಮತ್ತು ಫೆಲೆಸ್ತೀನ್ ಜನರ ನಡುವೆ ಸಾಮರಸ್ಯ ಮೂಡಿಸುವುದಕ್ಕಾಗಿ ತಮ್ಮ ಬದುಕುನ್ನೇ ಮುಡಿಪಾಗಿಟ್ಟಿರುವುದಕ್ಕಾಗಿ ಅವರನ್ನು ಈ ಪ್ರಶಸ್ತಿಗೆ ಆರಿಸಲಾಗಿದೆ.
ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಟಿ.ಎಸ್. ಠಾಕೂರ್ ನೇತೃತ್ವದ ಆಯ್ಕೆ ಮಂಡಳಿಯು ಪ್ರಶಸ್ತಿ ವಿಜೇತರನ್ನು ಆರಿಸಿದೆ.
ಇಂದಿರಾ ಗಾಂಧಿಯ ಜನ್ಮದಿನವಾದ ಮಂಗಳವಾರ ಪ್ರಶಸ್ತಿಯನ್ನು ಆನ್‌ಲೈನ್ ಮೂಲಕ ಪ್ರದಾನ ಮಾಡಲಾಗಿದೆ. ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ, ಭಾರತದ ಮಾಜಿ ಉಪರಾಷ್ಟ್ರಪತಿ ಎಮ್. ಹಾಮಿದ್ ಅನ್ಸಾರಿ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಮತ್ತು ನ್ಯಾ. ಟಿ.ಎಸ್. ಠಾಕೂರ್ ಆನ್‌ಲೈನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡೇನಿಯಲ್ ಬರೇನ್‌ಬಾಯಿಮ್ ಪರವಾಗಿ ಮರಿಯಮ್ ಸಿ. ಸಯೀದ್ ಪ್ರಶಸ್ತಿ ಸ್ವೀಕರಿಸಿದರು.
ಡೇನಿಯಲ್ ಬರೇನ್‌ಬಾಯಿಮ್ ಅರ್ಜೆಂಟೀನ ಸಂಜಾತ ಖ್ಯಾತ ಶಾಸ್ತ್ರೀಯ ಪಿಯಾನ್‌ವಾದಕರಾಗಿದ್ದಾರೆ. ಅವರು ಜಗತ್ತಿನಾದ್ಯಂತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅವರು ಪಶ್ಚಿಮ ಏಶ್ಯದಲ್ಲಿ ಸಾಮರಸ್ಯ ಮೂಡಿಸಲು ಸಂಗೀತವನ್ನು ಬಳಸಿದ್ದಾರೆ.
ಅಲಿ ಅಬು ಅವ್ವದ್ ಫೆಲೆಸ್ತೀನ್‌ನ ಖ್ಯಾತ ಶಾಂತಿ ಕಾರ್ಯಕರ್ತರಾಗಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಶಾಂತಿಯುತ ಪರಿಹಾರವೊಂದನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಅವರು ಫೆಲೆಸ್ತೀನ್ ಮತ್ತು ಇಸ್ರೇಲ್ ಜನತೆಯೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಮಿದ್ ಅನ್ಸಾರಿ ಪ್ರಶಸ್ತಿ ಪ್ರದಾನ ಮಾಡಿದರು.