ಇಸ್ರೇಲ್-ಹಿಜ್ಬೊಲ್ಲಾ ನಡುವೆ ಕದನ ವಿರಾಮ; ಶಾಂತಿಯತ್ತ ಮರಳಿದ ಲೆಬನಾನ್
ವರದಿ: ವ್ಯಾಟಿಕನ್ ನ್ಯೂಸ್
ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್ ಪಡೆಗಳ ತೀವ್ರ ದಾಳಿಯಿಂದ ಬೈರೂತ್ ನಗರದ ನಿವಾಸಿಗಳು ನಲುಗಿಹೋಗಿದ್ದರು. ಯುದ್ಧ ನಿಲ್ಲಿಸುವ ಒಪ್ಪಂದವು ನಿಜಕ್ಕೂ ಏರ್ಪಡಲಿದೆಯೇ ಎಂದು ಹಲವು ಮಂದಿ ಆಶ್ಚರ್ಯ ಕೂಡ ಪಟ್ಟಿದ್ದರು. ಈ ನಡುವೆ ಮಂಗಳವಾರ ಘೋಷಿಸಿರುವ ಕದನ ವಿರಾಮ ಒಪ್ಪಂದವನ್ನು ಹಿಬ್ಬುಲ್ಲಾ ಮುರಿದರೆ ಮರು ಗಳಿಗೆಯಲ್ಲೇ ದಾಳಿ ನಡೆಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ.
ಇಸ್ರೇಲ್-ಹಿಜ್ಜುಲ್ಲಾ ಕದನ ವಿರಾಮವು, 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪ್ರಚೋದಿಸಲ್ಪಟ್ಟ ಪ್ರಾದೇಶಿಕ ಅಶಾಂತಿಯನ್ನು ಕೊನೆಗೊಳಿಸುವ ಮೊದಲ ಪ್ರಮುಖ ಹೆಜ್ಜೆಯಾಗಿದೆ. ಆದರೆ, ಇದು ಗಾಜಾದಲ್ಲಿ ನಡೆಯುತ್ತಿರುವ ವಿನಾಶಕಾರಿ ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾವವನ್ನು ಹೊಂದಿಲ್ಲ.
ಮಂಗಳವಾರ ಲೆಬನಾನ್ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ 42 ಜನರು ಮೃತಪಟ್ಟಿದ್ದಾರೆ. ಹಿಬ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ದೇಶದ ಉತ್ತರ ಭಾಗದಲ್ಲಿ ವಾಯುದಾಳಿಯ ಎಚ್ಚರಿಕೆ ಸಂದೇಶಗಳು ಮೊಳಗಿದವು.
ಗಾಜಾದಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸುಮಾರು 14 ತಿಂಗಳ ಯುದ್ಧದಲ್ಲಿ 44,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 1,04,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.