ಪೋಪ್ ಫ್ರಾನ್ಸಿಸ್: ದೇವರ ಅನಂತ ಕರುಣೆಯಲ್ಲಿ ನಿಮ್ಮ ಭರವಸೆಯನ್ನಿಡಿ
ವರದಿ: ಥದ್ದೆಯೂಸ್ ಜೋನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಭಕ್ತಾಧಿಗಳನ್ನುದ್ದೇಶಿಸಿ ಮಾತನಾಡಿ, ಅಮಲೋದ್ಭವಿ ಮಾತೆಯ ಉದರದಿಂದ ಜನಿಸಿದ ಪ್ರಭು ಯೇಸುಕ್ರಿಸ್ತರಲ್ಲಿ ನೀವು ಭರವಸೆಯನ್ನಿಡಬೇಕು. ಪ್ರಭು ನಮ್ಮ ಜೀವನದಲ್ಲಿ ಬಂದು ನೆಲೆಸಿ, ಜೀವಿಸಲು ನಾವು ಆಕೆಯ ಮಧ್ಯಸ್ಥಿಕೆಯನ್ನು ಬೇಡೋಣ ಎಂದು ಹೇಳಿದ್ದಾರೆ.
ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಸಾವಿರಾರು ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ನಡೆಸಿದರು. "ಮಂಗಳವಾರ್ತೆಯ" ಕುರಿತು ಮಾತನಾಡಿದ ಅವರು ಹೇಗೆ ಮಾತೆ ಮರಿಯಮ್ಮನವರು ಗೇಬ್ರಿಯೇಲ್ ದೇವದೂತನು ದೇವರ ಸಂದೇಶವನ್ನು ತಂದಾಗ, ಮರು ಯೋಚಿಸದೆ "ದೇವರ ಚಿತ್ತದಂತೆ ನನಗಾಗಲಿ" ಎಂದು ಹೇಳುವ ಮೂಲಕ ತನ್ನನ್ನೇ ದೇವರ ಚಿತ್ತಕ್ಕೆ ಅರ್ಪಿಸಿಕೊಂಡರು ಎಂದು ವಿಶ್ವಗುರು ಫ್ರಾನ್ಸಿಸ್ ಅವರು ವಿವರಿಸಿದರು.
ಸಿಸ್ಟೇನ್ ಚಾಪೆಲ್'ನಲ್ಲಿರುವ ಮಿಖೆಲೆಂಜಲೋನ ಪ್ರಖ್ಯಾತ ಚಿತ್ರವಾದ ದೇವರು ಮಾನವನ ಬೆರಳನ್ನು ಸ್ಪರ್ಶಿಸುವ ಚಿತ್ರದ ಉದಾಹರಣೆಯನ್ನು ನೀಡಿದ ಪೋಪ್ ಫ್ರಾನ್ಸಿಸ್ ಅವರು "ಇದೇ ರೀತಿ ಮಾತೆ ಮರಿಯಮ್ಮನವರು ದೇವರ ಚಿತ್ತಕ್ಕೆ ಮಣಿದು, ಅವರ ಚಿತ್ತದಂತೆ ನನಗಾಗಲಿ ಎಂದು ಹೇಳಿದಾಗ ಮತ್ತೆ ದೇವರು ಮಾನವರಿಗೆ ತಮ್ಮ ದೈವಿಕ ಸ್ಪರ್ಶವನ್ನು ನೀಡಿದರು" ಎಂದು ಪೋಪ್ ಫ್ರಾನ್ಸಿಸ್ ಅವರು ನುಡಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನನ್ನ ಭರವಸೆಯನ್ನು ನಾನು ಎಲ್ಲಿ ಇರಿಸಿದ್ದೇನೆ" ಎಂಬ ಕುರಿತು ಎಲ್ಲರೂ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಎಂದು ಹೇಳಿದರು. "ಯುದ್ಧ ಹಾಗೂ ಸಾಕಷ್ಟು ವಿಕೋಪಗಳಿಂದ ಭಾಧಿತವಾಗಿರುವ ಈ ಜಗತ್ತಿನಲ್ಲಿ ಸಂತೋಷದ ಅನೇಕ ನಕಲಿ ಮಾದರಿಗಳಿವೆ. ನಾವು ಅವುಗಳಿಗೆ ಮರುಳಾಗಬಾರದು. ಬದಲಿಗೆ, ದೇವರು ಸದಾ ನಮ್ಮನ್ನು ಪ್ರೀತಿಸುತ್ತಾರೆ. ಅವರ ಪ್ರೀತಿಗೆ ಷರತ್ತುಗಳು ಅನ್ವಯಿಸುವುದಿಲ್ಲ ಎಂಬ ನಂಬಿಕೆ ಹಾಗೂ ಭರವಸೆಯಿಂದ ನಾವು ಜೀವಿಸಬೇಕು" ಎಂದು ಅವರು ಹೇಳಿದರು.
ನಾವು ಇನ್ನೇನು ಕೆಲವೇ ವಾರಗಳಲ್ಲಿ ಜ್ಯೂಬಿಲಿ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಜ್ಯೂಬಿಲಿಯ ದ್ವಾರಗಳನ್ನು ನಾವು ತೆರೆಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಹೃದಯಗಳೂ ಸಹ ದೇವರಿಗಾಗಿ ತೆರೆಯಲ್ಪಡಲಿ. ಈ ಜ್ಯೂಬಿಲಿ ವರ್ಷದಲ್ಲಿ ಭರವಸೆಯಿಂದ ಧರ್ಮಸಭೆಯಲ್ಲಿ ಒಂದೇ ಹಡಗಿನ ಪಯಣಿಗರಾಗಿ ನಮ್ಮ ಪ್ರಯಾಣವನ್ನು ಮುಂದುವರೆಸೋಣ ಎಂದು ಪೋಪ್ ಫ್ರಾನ್ಸಿಸ್ ನುಡಿದರು.