ಯುದ್ಧದಲ್ಲಿ ಬಂದೂಕಿನಿಂದ ಕೊಲ್ಲಲ್ಪಟ್ಟ ಮಕ್ಕಳಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಯುದ್ಧದಲ್ಲಿ ಬಂದೂಕಿನಿಂದ ಸಾವನ್ನಪ್ಪಿರುವ ಮಕ್ಕಳನ್ನು ನೆನೆದ ಅವರು, ಅವರಿಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಕರೆ ನೀಡಿದರು. ಜಗತ್ತಿನಲ್ಲಿ ಮತ್ತೆ ಶಾಂತಿಯನ್ನು ಮರುಸ್ಥಾಪಿಸಬೇಕು ಎಂದು ಹೇಳುವ ಮೂಲಕ ತಮ್ಮ ಮಾತುಗಳನ್ನು ಪುನರುಚ್ಛಿರಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಈ ವೇಳೆ ಯುದ್ಧದಲ್ಲಿ ಮಡಿದಿರುವ ಹಾಗೂ ಅದರಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ಜನತೆಯನ್ನು ನೆನಪಿಸಿಕೊಂಡು ಪ್ರಾರ್ಥಿಸಿದರು. ಈ ವೇಳೆ ಮಕ್ಕಳ ಕುರಿತು ವಿಶೇಷ ಕಾಳಜಿಯನ್ನು ವಹಿಸಿದ ಅವರು "ಮಕ್ಕಳು ದೇವರ ಕೊಡುಗೆ" ಎಂದು ಹೇಳಿದರು. ಯುದ್ಧ ಎಂಬುದು ಎಂದಿಗೂ ಸೋಲಾಗಿದ್ದು, ಇದರಿಂದ ನರಳುವುದು, ಯಾತನೆಯನ್ನು ಅನುಭವಿಸುವುದು ಮಾತ್ರ ನಿರಪರಾಧಿಗಳು ಹಾಗೂ ಜನ ಸಾಮಾನ್ಯರು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಯುದ್ಧಗಳು ನಿಲ್ಲಬೇಕೆಂಬ ಕುರಿತು ಹೇಳಿದ ಅವರು ಮತ್ತೆ ಕದನ ವಿರಾಮವನ್ನು ಎಲ್ಲಾ ಯುದ್ಧ ನಿರತ ದೇಶಗಳು ಘೋಷಿಸಬೇಕು ಎಂದು ಹೇಳಿದರು.
"ಇಂದು ಬೆಳಿಗ್ಗೆ ನಾನು ಕೆಲವು ಮಕ್ಕಳ ಜೊತೆ ಸಮಯ ಕಳೆದೆ. ಅದ್ಭುತವಾದ ಸಮಯವದು. ಆ ಸಮಯ ಕಳೆದಿದ್ದು ಹೇಗೆ ಅಂತಲೇ ಗೊತ್ತಾಗಲಿಲ್ಲ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು ಮಕ್ಕಳನ್ನು ಆಶೀರ್ವದಿಸಿದರು. ಇದಕ್ಕೂ ಮುಂಚಿತವಾಗಿ ಮಾತನಾಡಿದ ಅವರು ಉಕ್ರೇನ್ ದೇಶ ಸೇರಿದಂತೆ ಯುದ್ಧ ನಿರತ ದೇಶಗಳಲ್ಲಿನ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಬಂದೂಕಿನ ಶಬ್ದಗಳು ಶಾಶ್ವತವಾಗಿ ಮೌನವಾಗಲಿ. ಕ್ರಿಸ್ಮಸ್ ಸುಮಧುರ ಗೀತೆಗಳ ಝೇಂಕಾರ ಎಲ್ಲೆಡೆ ಮೊಳಗಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.