ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್: ಕುಟುಂಬಗಳೇ, ಒಟ್ಟಾಗಿ ಕುಳಿತು ಸಮಾಲೋಚಿಸಿರಿ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಇಂದು ಪವಿತ್ರ ಕುಟುಂಬದ ಮಹೋತ್ಸವವಾದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ತ್ರಿಕಾಲ ಪ್ರಾರ್ಥನೆಯನ್ನು ಮಾಡಿದರು. ಈ ವೇಳೆ ಅವರು ಕುಟುಂಬಗಳ ಮಹತ್ವದ ಕುರಿತು ತಿಳಿಸುತ್ತಾ, ಕುಟುಂಬಗಳು ಇನ್ನೂ ಹೆಚ್ಚಾಗಿ ಸಮಯವನ್ನು ಕಳೆಯಬೇಕು. ಒಟ್ಟಾಗಿ ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ.
ಇಂದಿನ ಶುಭಸಂದೇಶದಲ್ಲಿ ಯೇಸು ಕ್ರಿಸ್ತರು ಹನ್ನೆರಡು ವರ್ಷದ ಬಾಲಕರಾಗಿದ್ದಾಗ ಜೆರುಸಲೇಮಿನ ದೇವಾಲಯದಲ್ಲಿ ಕಾಣೆಯಾಗಿ ಹೋದ ಕುರಿತು ಹಾಗೂ ತದ ನಂತರ ತನ್ನ ಪೋಷಕರಿಗೆ ಮತ್ತೆ ಸಿಕ್ಕ ಕುರಿತು ಮಾತನಾಡಿ, ಚಿಂತನೆಯನ್ನು ನಡೆಸಿದರು.
"ಕುಟುಂಬವೆಂದರೆ ಸಂತೋಷದ ಕ್ಷಣಗಳು ಹಾಗೂ ಸಮಸ್ಯಾತ್ಮಕ ಕ್ಷಣಗಳೂ ಸಹ ಇರುತ್ತವೆ" ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಅವರು "ಕುಟುಂಬಗಳು ಉತ್ತಮ ಕುಟುಂಬಗಳಾಗಲು ತಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು "ಸಂವಾದಿಸಬೇಕು" ಎಂದು ಹೇಳಿದ್ದಾರೆ. "ನಜರೇತಿನ ಪವಿತ್ರ ಕುಟುಂಬವನ್ನು ನಮ್ಮ ಕುಟುಂಬಗಳ ಆದರ್ಶವೆಂದು ನಾವು ಪರಿಗಣಿಸಬೇಕೆಂದು ವಿಶ್ವಗುರು ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು ಒಂದೇ ಕುಟುಂಬವಾಗಿ ಕುಳಿತು ಒಟ್ಟಾಗಿ ಊಟ ಮಾಡುವುದು ಕುಟುಂಬದ ಐಕ್ಯತೆಗೆ ಎಷ್ಟು ಪ್ರಮುಖವಾಗಿದೆ ಎಂಬ ಕುರಿತು ಹೇಳಿದ್ದಾರೆ. ನಮ್ಮ ಕುಟುಂಬಗಳ ಒಳಿತಿಗಾಗಿ ಸದಾ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನು ಬೇಡಬೇಕೆಂದು ಹೇಳಿದ್ದಾರೆ.