ಪೋಪ್: ಕುರುಬರು ಹಾಗೂ ಜ್ಞಾನಿಗಳಂತೆ ನಾವು ಪ್ರಭು ಕ್ರಿಸ್ತರನ್ನು ಗುರುತಿಸಿ, ಅವರಿಗಾಗಿ ಹಂಬಲಿಸೋಣ
ವರದಿ: ತದ್ದೆಯೂಸ್ ಜೋನ್ಸ್
ಪ್ರಭುವಿನ ದೈವದರ್ಶನದ ಹಬ್ಬದ ಹಿನ್ನೆಲೆ ತ್ರಿಕಾಲ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ನಾವು ಹೇಗೆ ಯೇಸುಕ್ರಿಸ್ತರನ್ನು ನಮ್ಮ ಜೀವನಕ್ಕೆ ಆಹ್ವಾನಿಸಿಕೊಳ್ಳುತ್ತಿದ್ದೇವೆ ಎಂಬುದರ ಕುರಿತು ಗಮನಹರಿಸುವಂತೆ ವಿನಂತಿಸಿಕೊಂಡರು. ಇದೇ ವೇಳೆ ಕುರುಬರು ಹಾಗೂ ಜ್ಞಾನಿಗಳಂತೆ ನಾವು ಪ್ರಭು ಕ್ರಿಸ್ತರನ್ನು ಗುರುತಿಸಿ, ಅವರಿಗಾಗಿ ಹಂಬಲಿಸೋಣ ಎಂದು ಹೇಳಿದರು.
ಮಕ್ಕಳಿಗೆ ಸುವಾರ್ತಾ ಪ್ರಸಾರಕರಾಗಿರಲು ಕರೆ
ಸುವಾರ್ತಾ ಪ್ರಸಾರ ಬಾಲ್ಯದ ದಿನದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಮಕ್ಕಳಿಗೆ ಸದಾ ಪ್ರಾರ್ಥಿಸುವಂತೆ ಹಾಗೂ ಕ್ರೈಸ್ತ ಸುವಾರ್ತಾ ಪ್ರಸಾರ ಸೇವೆಗೆ ಆ ಮೂಲಕ ನೆರವಾಗುವಂತೆ ಕಿವಿಮಾತನ್ನು ಹೇಳಿದ್ದಾರೆ.
ಪ್ರಭುವಿನ ದೈವದರ್ಶನದ ಹಬ್ಬದ ದಿನ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಮಾತನಾಡುತ್ತಾ ಈ ಮಾತನ್ನು ಹೇಳಿದ್ದಾರೆ. ಸುವಾರ್ತಾ ಪ್ರಸಾರ ಬಾಲ್ಯದ ದಿನವನ್ನು 1950 ರಲ್ಲಿ ಅಂದಿನ ವಿಶ್ವಗುರು ಹನ್ನೆರಡನೇ ಭಕ್ತಿನಾಥರು ಸ್ಥಾಪಿಸಿದ್ದರು.
ಸುವಾರ್ತಾ ಪ್ರಸಾರ ಬಾಲ್ಯದ ದಿನದ ಈ ವರ್ಷದ ಶೀರ್ಷಿಕೆ "ಹೋಗಿ, ಎಲ್ಲರನ್ನೂ ಔತಣಕ್ಕೆ ಕರೆಯಿರಿ" ಎಂಬುದಾಗಿತ್ತು.
ಪೋಪ್ ಫ್ರಾನ್ಸಿಸ್ ಅವರು ಮಕ್ಕಳಿಗೆ ಸದಾ ಪ್ರಾರ್ಥಿಸುವಂತೆ ಹಾಗೂ ಕ್ರೈಸ್ತ ಸುವಾರ್ತಾ ಪ್ರಸಾರ ಸೇವೆಗೆ ಆ ಮೂಲಕ ನೆರವಾಗುವಂತೆ ಕಿವಿಮಾತನ್ನು ಹೇಳಿದ್ದಾರೆ.
ನಕ್ಷತ್ರದ ಮಾದರಿ ಹಾಗೂ ಅದರ ಅನುಕರಣೆ
"ಈ ಜಗತ್ತಿನ ಎಲ್ಲಾ ಮಾನವರು ತಮ್ಮ ವೈವಿಧ್ಯತೆಯೊಂದಿಗೆ ಒಂದಾಗಿ ಶಾಂತಿ ಹಾಗೂ ಸಾಮರಸ್ಯದಿಂದ ಜೀವಸಲಿ ಎಂಬ ದೇವರ ಕನಸನ್ನು ಈ ನಕ್ಷತ್ರವು ಪ್ರತಿಬಿಂಬಿಸುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಹೇಳಿದ್ದಾರೆ. ಮೂರು ರಾಯರನ್ನು ಯೇಸುವಿನ ಬಳಿಗೆ ಕರೆ ತಂದ ನಕ್ಷತ್ರದ ಮೂರು ವೈಶಿಷ್ಟ್ಯಗಳ ಕುರಿತು ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದರು.
"ನಕ್ಷತ್ರದ ಪ್ರಕಾಶಮಾನತೆಯ ಕುರಿತು ಮಾತನಾಡಿದ ಅವರು "ನಕ್ಷತ್ರವು ಪ್ರಕಾಶಮಾನವಾಗಿರುವಂತೆ ಹಳೆಯ ಕಾಲದ ರಾಜರುಗಳು ತಮ್ಮನ್ನು ಸೂರ್ಯನ ಪ್ರಖರತೆ ಅಥವಾ ಪ್ರಕಾಶಮಾನಕ್ಕೆ ಹೋಲಿಸಿಕೊಂಡರು. ಆದರೆ ಈ ನಕ್ಷತ್ರವು ತನ್ನ ಪ್ರಕಾಶಮಾನತೆಯ ಕುರಿತು ಹೇಳಿಕೊಳ್ಳದೆ, ಮತ್ತೊಬ್ಬರಿಗೆ ಬೆಳಕನ್ನು ನೀಡುತ್ತಾ, ನಿಜ ಬೆಳಕಾದ ಕ್ರಿಸ್ತರ ಬಳಿಗೆ ಮೂರು ರಾಯರನ್ನು ಕರೆತಂದಿತು" ಎಂದು ಹೇಳಿದ್ದಾರೆ.
ಈ ನಕ್ಷತ್ರವು ಎಲ್ಲರಿಗೂ ಕಾಣಿಸುವ ನಕ್ಷತ್ರವಾಗಿದ್ದು, ಎಲ್ಲರೂ ಸಹ ಕ್ರಿಸ್ತರ ಬಳಿಗೆ ಬರುವಂತೆ ಇದು ಪ್ರೇರೇಪಿಸುತ್ತಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಶುಧ್ಧ ಹಾಗೂ ಪ್ರಾಮಾಣಿಕ ಹೃದಯದಿಂದ ಕ್ರಿಸ್ತರನ್ನು ಹುಡುಕುತ್ತಿರುವವರಿಗೆ ಕ್ರಿಸ್ತರು ಸಿಗುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.