ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್: ಪ್ರೀತಿಯ ದೇವರನ್ನು ಅನುಕರಿಸಿ, ಭರವಸೆಯ ಸಂದೇಶಕರಾಗಿರಿ
ವರದಿ: ಕ್ರಿಸ್ಟೋಫರ್ ವೆಲ್ಸ್
"ಇಂದು ಭಾನುವಾರದ ಶುಭಸಂದೇಶವು ದೇವರ ಪ್ರೀತಿ ಎಂಬುದು ಎಷ್ಟು ಶಕ್ತವಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಇದೇ ಪ್ರೀತಿ ನಮಗೆ ಮಾರ್ಗದರ್ಶನವನ್ನು ನೀಡಿ, ನಮ್ಮ ದಾರಿದೀಪವಾಗಿ ಮುನ್ನಡೆಸುತ್ತದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ಇಂದು ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕ್ರಿಸ್ಮಸ್ ಹಬ್ಬವು ದೇವರು ನಮ್ಮನ್ನು ನಾವಿರುವೆಡೆ ಬಂದು ಸಂಧಿಸುವುದರ ಸಂಕೇತವಾಗಿದೆ ಎಂದು ಹೇಳಿದ್ದಾರೆ. ಮಾನವತ್ವದ ಅತಿ ಕರಾಳ ರಾತ್ರಿಯಲ್ಲಿಯೂ ಸಹ ದೇವರು ಎಲ್ಲೋ ಒಂದು ಕಡೆ ಭರವಸೆಯ ಬೆಳಕಿನ ಕಿಟಕಿಯನ್ನು ತೆರೆಯುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
"ಇಂದು ನಾವು ಈ ಜಗತ್ತಿನಲ್ಲಿ ಅನೇಕ ಕಷ್ಟ-ಕಾರ್ಪಣ್ಯಗಳನ್ನು ನೋಡುತ್ತೇವೆ ಹಾಗೂ ಎದುರಿಸುತ್ತಿದ್ದೇವೆ. ಆದರೂ ಸಹ ದೇವರು ನಮ್ಮನ್ನು ಕೈಬಿಡುವುದಿಲ್ಲ. ಕ್ರಿಸ್ತ ಜಯಂತಿಯ ಅರ್ಥವೂ ಸಹ ಇದೇ ಆಗಿದೆ. ದೇವರು ನಮಗಾಗಿ ನಾವಿರುವೆಡೆಗೆ, ನಮ್ಮ ಯಾವುದೇ ಸನ್ನಿವೇಷಗಳಲ್ಲಿ ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಇದೇ ಕ್ರಿಸ್ಮಸ್ ತಾತ್ಪರ್ಯ" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ನುಡಿದರು.
ಮುಂದುವರೆದು ಮಾತನಾಡಿದ ಅವರು "ಇಂದು ಪ್ರಭು ನಮಗೆ ಒಂದು ಕರೆಯನ್ನು ನೀಡುತ್ತಿದ್ದಾರೆ. ಅದೇನೆಂದರೆ ನಾವು ಮೊದಲ ಹೆಜ್ಜೆಯನ್ನು ಇಡಲು ಭಯಪಡಬಾರದು ಎಂಬುದು. ನಾವು ಧೈರ್ಯದಿಂದ ಪ್ರಭುವಿನ ಹೆಜ್ಜೆಗಳಲ್ಲಿ ನಡೆಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡಬೇಕು. ಆ ಮೂಲಕ ಈ ಜಗತ್ತಿನಲ್ಲಿ ಯಾತನೆಯನ್ನು ಅನುಭವಿಸುತ್ತಿರುವವರು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು" ಎಂದು ಹೇಳಿದರು.
ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು "ಈ ಜಗತ್ತಿನಲ್ಲಿ ಯುದ್ಧಗಳು ಹಾಗೂ ಎಲ್ಲಾ ರೀತಿಯ ಹಿಂಸೆಗಳು ಕೊನೆಗೊಂಡು ಶಾಂತಿ ನೆಲೆಸಬೇಕು. ಇದಕ್ಕಾಗಿ ನಾವೆಲ್ಲರೂ ಪ್ರಾರ್ಥಿಸಬೇಕು" ಎಂದು ಅವರು ಮತ್ತೊಮ್ಮೆ ಶಾಂತಿಯ ಕುರಿತ ತಮ್ಮ ಮನವಿಯನ್ನು ಪುನರುಚ್ಛರಿಸಿದರು.