ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್: ಶಾಂತಿಯ ನಾಗರೀಕತೆಯನ್ನು ನಿರ್ಮಿಸಲು ಜೀವವನ್ನು ಸಂರಕ್ಷಿಸಿರಿ
ವರದಿ: ತದ್ದೆಯೂಸ್ ಜೋನ್ಸ್
ಪೋಪ್ ಫ್ರಾನ್ಸಿಸ್ ಅವರು ಹೊಸ ವರ್ಷದ ಹಾಗೂ ದೇವಮಾತೆ ಮರಿಯಮ್ಮನವರ ಮಹೋತ್ಸವದ ಇಂದು ಮಧ್ಯಾಹ್ನ ತ್ರಿಕಾಲ ಪ್ರಾರ್ಥನೆಯನ್ನು ವ್ಯಾಟಿಕನ್ನಿನ ಸಂತ ಪೇತ್ರರ ಚೌಕದಲ್ಲಿ ಪ್ರಾರ್ಥಿಸಿದ್ದಾರೆ. ಈ ವೇಳೆ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು "ಶುಭ ಸಂದೇಶದ ಸಂತೋಷವನ್ನು ನಮ್ಮ ಹೃದಯಗಳಲ್ಲಿ ಆಳವಡಿಸಿಕೊಳ್ಳಲು ಮಾತೆ ಮರಿಯಮ್ಮನವರು ನಮಗೆ ನೆರವಾಗಿ, ಆ ಮೂಲಕ ನಾವು ಜಗತ್ತಿಗೆ ಸಾಕ್ಷಿಗಳಾಗುವಂತಾಗಲಿ" ಎಂದು ಹೇಳಿದ್ದಾರೆ.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು 'ಯೇಸು' ಅಥವಾ 'ಜೀಸಸ್' ಎಂಬ ಹೆಸರಿನ ಅರ್ಥದ ಕುರಿತು ವಿವರಿಸಿದರು. "ಹಿಬ್ರೂ ಭಾಷೆಯಲ್ಲಿ 'ಯೇಸು' ಅಥವಾ 'ಜೀಸಸ್' ಎಂದರೆ 'ದೇವರು ರಕ್ಷಿಸುತ್ತಾರೆ' ಎಂದು ಅರ್ಥ. ದೇವರು ಯೇಸುಕ್ರಿಸ್ತರನ್ನು ನಮ್ಮ ಬಳಿಗೆ ಕಳುಹಿಸಿದ್ದು ನಮ್ಮ ರಕ್ಷಣೆಗಾಗಿ, ಮನುಷ್ಯಕುಲದ ರಕ್ಷಣೆಗಾಗಿ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತಾಯಿಯ ಮಮತೆಯ ಕುರಿತು ಮಾತನಾಡಿದರು. "ಮಾತೆ ಮರಿಯಮ್ಮನವರ ಹೃದಯ ಎಂದಿಗೂ ದೇವರ ಕರುಣೆಯಿಂದ ಮಿಳಿತವಾಗಿ ಪ್ರಭು ಯೇಸುವಿಗಾಗಿ ಮಿಡಿಯುತ್ತಿತ್ತು. ತಾಯಂದಿರು ಹೃದಯವು ಸದಾ ತಮ್ಮ ಮಕ್ಕಳಿಗಾಗಿ ಮಿಡಿಯುತ್ತದೆ. ಅದೇ ರೀತಿ ಈ ಸಮಯದಲ್ಲಿ ನಾವೆಲ್ಲರೂ ನಮ್ಮ ತಾಯಂದಿರನ್ನು ನೆನಪಿಸಿಕೊಂಡು, ಅವರಿಗಾಗಿ ಪ್ರಾರ್ಥಿಸಬೇಕು" ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು "ನಾವು ಶುಭ ಸಂದೇಶದ ಸಂತೋಷವನ್ನು ಹೃದಯಗಳಲ್ಲಿ ಆಳವಡಿಸಿಕೊಳ್ಳಬೇಕು. ಮಾತೆ ಮರಿಯಮ್ಮನವರು ನಮಗೆ ನೆರವಾಗಿ, ಆ ಮೂಲಕ ನಾವು ಜಗತ್ತಿಗೆ ಸಾಕ್ಷಿಗಳಾಗುವಂತಾಗಲಿ" ಎಂದು ಅವರು ಹೇಳಿದ್ದಾರೆ.